ADVERTISEMENT

ಕೋಲಾರ: ಬರದ ಜಿಲ್ಲೆಯಲ್ಲಿ ಶ್ರೀಗಂಧ ಕ್ರಾಂತಿ

ಅರಣ್ಯ ಪ್ರದೇಶದಲ್ಲಿ ನೀಲಗಿರಿಗೆ ಪರ್ಯಾಯವಾಗಿ ಗಂಧದ ಸಸಿಗಳ ನಾಟಿ

ಜೆ.ಆರ್.ಗಿರೀಶ್
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಸಸಿಗಳನ್ನು ಬೆಳೆಸಿರುವುದು.
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಸಸಿಗಳನ್ನು ಬೆಳೆಸಿರುವುದು.   

ಕೋಲಾರ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕೃಷಿ ಕ್ರಾಂತಿಗೆ ಅರಣ್ಯ ಇಲಾಖೆಯು ಮುನ್ನುಡಿ ಬರೆದಿದೆ. ನೀಲಗಿರಿಗೆ ಪರ್ಯಾಯವಾಗಿ ಗಂಧದ ಮರಗಳನ್ನು ಬೆಳೆಸುವ ಪ್ರಯತ್ನ ಸದ್ದಿಲ್ಲದೆ ಸಾಗಿದ್ದು, ಜಿಲ್ಲೆಯು ಭವಿಷ್ಯದಲ್ಲಿ ಶ್ರೀಗಂಧದ ನೆಲೆ ಬೀಡಾಗಲಿದೆ.

ಹಿಂದೆ ಕೋಲಾರ ಎಂದರೆ ಚಿನ್ನದ ನಾಡು, ಶ್ರೀಗಂಧದ ಬೀಡು ಎಂಬ ಉಪಮೆ ಕಣ್ಣ ಮುಂದೆ ಸುಳಿಯುತ್ತಿತ್ತು. ಕಾಲಚಕ್ರ ಉರುಳಿದಂತೆ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿತು. ಗಂಧದ ಮರಗಳು ಕಣ್ಮರೆಯಾದವು. ಜಿಲ್ಲೆಯ ಗತ ವೈಭವ ಮರು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಅರಣ್ಯ ಇಲಾಖೆಯು ಗಂಧದ ಸಂಪತ್ತು ವೃದ್ಧಿಸುವತ್ತ ಆಸಕ್ತಿ ವಹಿಸಿದೆ.

ಈ ಹಿಂದೆ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿಯಾಗಿದ್ದ (ಆರ್‌ಎಫ್‌ಒ) ರಾಮಕೃಷ್ಣಪ್ಪ ಮತ್ತು ಸಿಬ್ಬಂದಿ ತಂಡವು ಅರಣ್ಯ ಒತ್ತುವರಿ ತಡೆ ಹಾಗೂ ಹಸಿರೀಕರಣದ ಉದ್ದೇಶಕ್ಕಾಗಿ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು 5 ಲಕ್ಷ ಗಂಧದ ಸಸಿ ನಾಟಿ ಮಾಡಿಸಿದ್ದು, ಶೇ 90ರಷ್ಟು ಸಸಿಗಳು ಬದುಕುಳಿದಿವೆ.

ADVERTISEMENT

ಕಲ್ಲೂರು–ಮಣಿಗಾನಹಳ್ಳಿ, ದಳಸನೂರು, ಎ.ಎಂ.ಪಲ್ಲಿ ಅರಣ್ಯ ಪ್ರದೇಶ ಹಾಗೂ ಹೊದಲಿ ಗೋಮಾಳದಲ್ಲಿ ಮಳೆ ನೀರಿನ ಆಶ್ರಯದಲ್ಲೇ ಪ್ರಾಯೋಗಿಕವಾಗಿ ಗಂಧದ ಸಸಿಗಳನ್ನು ಬೆಳೆಸಲಾಗಿದೆ. ಈ ಮೂಲಕ ರಾಜ್ಯದಲ್ಲೇ ಹೆಚ್ಚಿನ ಪ್ರದೇಶದಲ್ಲಿ ಗಂಧದ ಸಸಿಗಳನ್ನು ನೆಟ್ಟಿರುವ ಜಿಲ್ಲೆಯೆಂಬ ಖ್ಯಾತಿಗೆ ಕೋಲಾರ ಪಾತ್ರವಾಗಿದೆ. ಗಂಧದ ಸಸಿಗಳ ಮಧ್ಯೆ ರಕ್ತಚಂದನ, ಬೀಟೆ, ಹೊನ್ನೆ ಮತ್ತು ಹೆಬ್ಬೇವು ಸಸಿಗಳನ್ನು ಬೆಳೆಸಲಾಗಿದೆ.

ಕೋಟಿಗಟ್ಟಲೇ ಆದಾಯ: ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ವಿರಳವಾಗಿ ಶ್ರೀಗಂಧ ಬೆಳೆಯಲಾಗಿದೆ. ಆದರೆ, ಶ್ರೀನಿವಾಸಪುರ ಅರಣ್ಯ ವಲಯವೊಂದರಲ್ಲೇ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಗಂಧದ ಸಸಿಗಳನ್ನು ಬೆಳೆಸಿರುವುದು ಮಾದರಿಯಾಗಿದೆ.

ದೇಸಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಗಂಧದ ಮರಗಳು ಪರಿಸರಕ್ಕೆ ಪೂರಕವಾಗಿರುವುದಲ್ಲದೆ ತುಂಬಾ ಲಾಭದಾಯಕ. ಸುದೀರ್ಘ ಕಾಲ ತೆಗೆದುಕೊಂಡರೂ ಅತಿ ಹೆಚ್ಚು ಲಾಭ ತರುವ ಕಡಿಮೆ ಖರ್ಚಿನ ಬೆಳೆ. ಭವಿಷ್ಯದ ಹೂಡಿಕೆ ಎಂದೇ ಭಾವಿಸಲಾಗಿರುವ ಶ್ರೀನಿವಾಸಪುರ ಅರಣ್ಯ ವಲಯದಲ್ಲಿನ ಗಂಧದ ಮರಗಳಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಹರಿದು ಬರಲಿದೆ.

ಶ್ರೀನಿವಾಸಪುರ ತಾಲ್ಲೂಕಿನ ಆವಲಕೊಪ್ಪದಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಗಂಧದ ಸಸಿಗಳನ್ನು ಬೆಳೆಸಲಾಗುತ್ತದೆ. ಈ ನರ್ಸರಿಯಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಸಿ ಖರೀದಿಸಿಕೊಂಡು ಹೋಗಲಾಗುತ್ತದೆ. ಅಲ್ಲದೇ, ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ಮಾರಾಟ ಮಾಡಲಾಗುತ್ತದೆ.

ಸಂರಕ್ಷಣೆಯ ಸವಾಲು: ಕೇರಳದ ಮರಿಯೂರು ಅರಣ್ಯ ಪ್ರದೇಶವು ನೈಸರ್ಗಿಕವಾಗಿ ಬೆಳೆದ ಶ್ರೀಗಂಧ ಮರಗಳ ಸಂಪತ್ತಿಗೆ ಹೆಸರಾಗಿದೆ. ಕೇರಳ ಸರ್ಕಾರ ಈ ಅರಣ್ಯ ಪ್ರದೇಶದಲ್ಲಿನ ಗಂಧದ ಮರಗಳ ರಕ್ಷಣೆಗಾಗಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಿದೆ ಮತ್ತು ಪ್ರತ್ಯೇಕ ಪೊಲೀಸ್‌ ಪಡೆ ರಚಿಸಿದೆ.

ಗಂಧದ ಸಸಿಗಳು ದೊಡ್ಡ ಮರಗಳಾಗಿ ಕಟಾವಿಗೆ ಬರಲು ಸುಮಾರು 30 ವರ್ಷ ಕಾಲಾವಕಾಶ ಬೇಕು. ಆವರೆಗೆ ಮರಗಳನ್ನು ಸಂರಕ್ಷಿಸುವುದು ಅರಣ್ಯ ಇಲಾಖೆಗೆ ನಿಜಕ್ಕೂ ದೊಡ್ಡ ಸವಾಲು. ಸದ್ಯ ಶ್ರೀನಿವಾಸಪುರ ಅರಣ್ಯ ವಲಯದಲ್ಲಿನ ಸಸಿಗಳು ಸದ್ಯ ಚಿಕ್ಕದಿರುವುದರಿಂದ ರಕ್ಷಣೆಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಅರಣ್ಯ ಪ್ರದೇಶದ ಸುತ್ತಲೂ ತಂತಿ ಬೇಲಿ ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.