ADVERTISEMENT

28ಕ್ಕೆ ಕೆಂಬೋಡಿ ಶಾಲಾ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 13:48 IST
Last Updated 26 ಸೆಪ್ಟೆಂಬರ್ 2018, 13:48 IST

ಕೋಲಾರ: ‘ಸ್ಯಾಮ್‌ಸಂಗ್ ಕಂಪನಿ ವತಿಯಿಂದ ತಾಲ್ಲೂಕಿನ ಕೆಂಬೋಡಿ ಗ್ರಾಮದ ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೆ.28ರಂದು ನಡೆಯಲಿದೆ’ ಎಂದು ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ಕಂಪನಿಯವರು ಹಳೇ ಕಟ್ಟಡ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಿರುವ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಉದ್ಘಾಟಿಸುತ್ತಾರೆ’ ಎಂದರು.

‘ಸ್ಯಾಮ್‌ಸಂಗ್‌ ಕಂಪನಿ ಉಪಾಧ್ಯಕ್ಷ ದೀಪೇಶ್ ಶಾಹ್, ಹಣಕಾಸು ಮುಖ್ಯಾಧಿಕಾರಿ ಹೀಜೋನ್ ಕಾಂಗ್, ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿ.ಪಂ ಸಿಇಒ ಜಗದೀಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ಹಾಗೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದು ವಿವರಿಸಿದರು.

ADVERTISEMENT

‘ಸ್ಯಾಮ್‌ಸಂಗ್‌ ಕಂಪನಿಯು ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಈಗಾಗಲೇ ₹ 2.75 ಕೋಟಿ ವೆಚ್ಚ ಮಾಡಿದೆ. ಜತೆಗೆ ಕಲಿಕೆಗೆ ಪೂರಕವಾದ ಲೇಖನಿ ಸಾಮಗ್ರಿ, ನೋಟ್ ಪುಸ್ತಕ, ಸಮವಸ್ತ್ರ, ಸಾಕ್ಸ್, ಶೂ ವಿತರಿಸಿದೆ. ಕಂಪನಿಯು ಕೆಂಬೋಡಿ ಶಾಲೆಯಲ್ಲಿ ಪಾಠೋಪಕರಣ ಹಾಗೂ ಪೀಠೋಪಕರಣ ಸೇರಿದಂತೆ ಆಧುನಿಕ ಮಾದರಿಯ 6 ಕೊಠಡಿ ನಿರ್ಮಿಸಿದೆ’ ಎಂದು ಮಾಹಿತಿ ನೀಡಿದರು.

‘ಎಪ್ಸನ್ ಕಂಪನಿ ವತಿಯಿಂದ ತಾಲ್ಲೂಕಿನ ಕೋರಗಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದ 4.20 ಎಕರೆ ಪ್ರದೇಶದಲ್ಲಿ ಹಾಗೂ ಚೌಡದೇನಹಳ್ಳಿಯಲ್ಲಿ 2 ಸಾವಿರ ಗಿಡಗಳನ್ನು ನೆಡಲಾಗಿದೆ. ನಗರದ ಪಿ.ಸಿ ಬಡಾವಣೆ ಶಾಲೆಯ 6 ಕೊಠಡಿಗಳಿಗೆ ನೆಲಹಾಸು ಹಾಕಿಸಲಾಗಿದೆ ಮತ್ತು ಕಟ್ಟಡಕ್ಕೆ ಬಣ್ಣ ಬಳಿಸಲಾಗಿದೆ. ವಿದ್ಯುತ್ ಸಂಪರ್ಕ ಸಹ ಕಲ್ಪಿಸಿಕೊಟ್ಟಿದೆ’ ಎಂದು ಹೇಳಿದರು.

ಶೈಕ್ಷಣಿಕ ಅಭಿವೃದ್ಧಿ: ‘ಗೆಳೆಯರ ಬಳಗವು ಒಂದೂವರೆ ದಶಕದಿಂದ ಜಿಲ್ಲೆಯಾದ್ಯಂತ ವಿವಿಧ ಕಂಪನಿಗಳ ಮತ್ತು ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ದಾನಿಗಳಿಂದ ಬಂದ ಲಕ್ಷಾಂತರ ರೂಪಾಯಿ ಹಣಕಾಸು ನೆರವನ್ನು ವಿದ್ಯಾರ್ಥಿಗಳ ಪ್ರಗತಿಗೆ ವಿನಿಯೋಗಿಸಲಾಗಿದೆ’ ಎಂದು ವಿವರಿಸಿದರು.

ಗೆಳೆಯರ ಬಳಗದ ಸದಸ್ಯರಾದ ಜಿ.ಶ್ರೀನಿವಾಸ್, ಆರ್.ಶ್ರೀನಿವಾಸನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.