
ಕೋಲಾರ: ತಾಲ್ಲೂಕಿನ ಹೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹೊರಾಂಗಣದ ಐದು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ
ಸುಮಾರು ₹ 25 ಸಾವಿರ ಮೌಲ್ಯದ ಕ್ಯಾಮೆರಾಗಳು ಕಳ್ಳತನವಾಗಿವೆ. ಇದಲ್ಲದೇ, ಶಾಲೆಯ ಆವರಣದ ರಂಗಮಂದಿರಲ್ಲಿ ಮದ್ಯಪಾನ ಮಾಡಿ ಬಾಟಲುಗಳು ಒಡೆದು ಹಾಕಿದ್ದಾರೆ, ಪ್ಯಾಕೆಟ್‌ಗಳನ್ನು ಅಲ್ಲೇ ಎಸೆದು ಹೋಗಿದ್ದಾರೆ.
ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ರಮೇಶ್ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ಸಹ ಒಂದೇ ಕಾಂಪೌಂಡಿನಲ್ಲಿ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಇವೆ. ಗ್ರಾಮಸ್ಥರು ಹಾಗೂ ಎನ್‌ಜಿಒ ಸೇರಿ ಹಲವು ಕೆಲಸ ಮಾಡಿಕೊಟ್ಟಿದ್ದಾರೆ.
ಶಾಲಾ ಆವರಣದಲ್ಲಿ ರಾತ್ರಿ ಹಾಗೂ ರಜಾ ದಿನಗಳಲ್ಲಿ ವೇಳೆ ನಿರಂತರವಾಗಿ ಜನ್ಮದಿನದ ಪಾರ್ಟಿಗಳು, ಅನೈತಿಕ ಚಟುವಟಿಕೆಗಳು, ಜೂಜಾಟ ನಡೆಯುತ್ತಿರುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಲವಾರು ಬಾರಿ ಪೊಲೀಸರ ಗಮನಕ್ಕೆ ತಂದು ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಆಗ್ರಹಿಸಿದ್ದೆವು. ಆದರೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.