ADVERTISEMENT

ಶಾಲಾ ಪ್ರಾರಂಭೋತ್ಸವ: ಸಂಭ್ರಮದಿಂದ ಆಚರಿಸಿ

ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 13:19 IST
Last Updated 14 ಮೇ 2022, 13:19 IST

ಕೋಲಾರ: ‘ಶಾಲೆಗಳು ಮೇ 16ರಂದು ಆರಂಭವಾಗುತ್ತಿದ್ದು, ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸುವುದರ ಜತೆಗೆ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಿ. ಸ್ವಚ್ಛತೆ ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ಕೊಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಕಿವಿಮಾತು ಹೇಳಿದರು.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಇಲ್ಲಿ ಶನಿವಾರ ನಡೆದ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

‘ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ. ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಸ್ವಾಗತಿಸಿ. ಶಾಲೆಯಲ್ಲಿ ಮೊದಲ ದಿನ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಬಡಿಸಿ. ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಾಲಾ ಆವರಣ, ಶೌಚಾಲಯ, ಅಡುಗೆ ಮನೆ, ಶಾಲಾ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ. ಗ್ರಾಮದ ಎಸ್‍ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರ ಸಹಕಾರ ಪಡೆದು ಸ್ವಚ್ಛತಾ ಕಾರ್ಯ ನಡೆಸಿ’ ಎಂದು ಸೂಚಿಸಿದರು.

ADVERTISEMENT

‘ಕೋವಿಡ್ ಆತಂಕ ಇಲ್ಲದಿದ್ದರೂ ಮಕ್ಕಳ ಸುರಕ್ಷತೆ ಅತಿ ಮುಖ್ಯ. ಶಾಲೆಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಿ. ಈ ಸಂಬಂಧ ಶಾಲಾಭಿವೃದ್ಧಿ ಸಮಿತಿ ಸದಸ್ಯರ, ಪೋಷಕರ ಸಭೆ ನಡೆಸಿ ಅರಿವು ಮೂಡಿಸಿ’ ಎಂದು ಹೇಳಿದರು.

‘ತರಗತಿಗಳು ಸಮರ್ಪಕವಾಗಿ ನಡೆಯಲು ಶಾಲಾ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಅಗತ್ಯ ದಾಖಲೆಗಳನ್ನು ನಿರ್ವಹಣೆ ಮಾಡಿ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಮುಖ್ಯ ಶಿಕ್ಷಕರ ಜವಾಬ್ದಾರಿ. ಶಾಲೆಗಳನ್ನು ಆಕರ್ಷಣೀಯಗೊಳಿಸಿ. ಗ್ರಂಥಾಲಯ, ಗಣಕಯಂತ್ರ, ಪ್ರಯೋಗಾಲಯ ಎಲ್ಲವೂ ಸುಸಜ್ಜಿತವಾಗಿರಬೇಕು’ ಎಂದರು.

ರೆಡ್‌ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಶಿಕ್ಷಕರಿಗೆ ಮಾಸ್ಕ್‌ ವಿತರಿಸಿದರು. ಶಿಕ್ಷಣ ಸಂಯೋಜಕ ಮುನಿರತ್ನಯ್ಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಪ್ರವೀಣ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಗಜೇಂದ್ರಪ್ಪ, ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.