ADVERTISEMENT

ನಿತ್ಯ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕು

ಕರ್ನಾಟಕ ವಿಜ್ಞಾನ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಭೀಮರಾವ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:19 IST
Last Updated 10 ಏಪ್ರಿಲ್ 2021, 14:19 IST
‘ವಿಜ್ಞಾನ ಒಂದು ಚಿಂತನೆ’ ಕುರಿತು ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಭೀಮರಾವ್‌ ಮಾತನಾಡಿದರು.
‘ವಿಜ್ಞಾನ ಒಂದು ಚಿಂತನೆ’ ಕುರಿತು ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಭೀಮರಾವ್‌ ಮಾತನಾಡಿದರು.   

ಕೋಲಾರ: ‘ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ’ ಎಂದು ಕರ್ನಾಟಕ ವಿಜ್ಞಾನ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಭೀಮರಾವ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಒಂದು ಚಿಂತನೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಪ್ರತಿ ವಿಷಯವೂ ವಿಜ್ಞಾನದಿಂದಲೇ ಆರಂಭವಾಗುತ್ತದೆ. ತರ್ಕ ಆಧರಿಸಿ ವಿವರಣೆ ನೀಡುವುದೇ ವಿಜ್ಞಾನ. ವಿಜ್ಞಾನವಿಲ್ಲದೆ ಈ ಜಗತ್ತೇ ಇಲ್ಲ. ಗ್ರಾಮೀಣ ಜನರಿಗೂ ವಿಜ್ಞಾನದ ಅರಿವು ಮೂಡಿಸಬೇಕು. ವಿಜ್ಞಾನವನ್ನು ಜೀವನದ ಹವ್ಯಾಸವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.

‘ವಿಜ್ಞಾನ ಕೇವಲ ಪ್ರಯೋಗ ಶಾಲೆಯಲ್ಲ. ಅದೊಂದು ಸಂಶೋಧನೆ, ಸಮೀಕ್ಷೆ, ವಿಶೇಷವಾದ ಜ್ಞಾನ. ಶಾಲೆಯೊಳಗಿನ ಪ್ರಯೋಗ ಶಾಲೆ, ಕೇವಲ ಪ್ರಯೋಗಗಳಿಂದ ವಿಜ್ಞಾನ ಅರ್ಥಪೂರ್ಣವಾಗಲಾರದು. ವಿಷಯದ ಮೇಲೆ ಸಂಶೋಧನೆ, ಸಮೀಕ್ಷೆ, ಪ್ರಶ್ನೋತ್ತರ, ಚರ್ಚೆ ನಿರಂತರವಾಗಿ ಆಗಬೇಕು. ಆಗ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೆ ಅನೇಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಲಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಪರಿಸರದಲ್ಲಿರುವ ನೀರು, ಗಿಡ, ಮರ, ಪ್ರಾಣಿ ಪಕ್ಷಿಗಳೂ ಸೇರಿದಂತೆ ಅವುಗಳ ಜೀವನದ ಅನುಭವಗಳ ಆಧಾರದ ಮೇಲೆ ಕುತೂಹಲಕಾರಿ ಪ್ರಶ್ನೆಗಳ ಹುಡುಕಾಟದಲ್ಲಿ ಸಿಗುವ ಉತ್ತರವೇ ಜ್ಞಾನ ವಿಜ್ಞಾನ ಆಗಿದೆ. ಮಕ್ಕಳಿಗೆ ತಾತ್ವಿಕವಾಗಿ ವಿಜ್ಞಾನ ತಿಳಿಸುವುದರ ಬದಲು ಪ್ರಯೋಗಗಳ ಮೂಲಕ ಸಾಕ್ಷೀಕರಿಸಿ ಪ್ರದರ್ಶಿಸಿದರೆ ಬೇಗ ಕಲಿಯುತ್ತಾರೆ. ವಿಜ್ಞಾನವನ್ನು ಪ್ರಯೋಗಗಳ ಮೂಲಕ ಸಾಧಿಸಿ ಅರ್ಥೈಸಿಕೊಂಡರೆ ಹೆಚ್ಚು ಕಾಲ ಮನದಲ್ಲಿ ಉಳಿಯುತ್ತದೆ’ ಎಂದರು.

ವೈಜ್ಞಾನಿಕ ತಳಹದಿ: ‘ಪ್ರಾಣಿ ಪಕ್ಷಿ ಪ್ರಬೇಧಗಳ ಅಧ್ಯಯನ ಒಳಗೊಂಡು ನಮಗೆ ಅರ್ಥವಾಗದ ಪ್ರತಿ ವಿಷಯದ ಬಗ್ಗೆ ವೈಜ್ಞಾನಿಕ ತಳಹದಿಯ ಮೇಲೆ ಸಂಶೋಧನೆ ನಡೆಸಬೇಕು. ವಿಶೇಷ ವಿಚಾರ ಮಂಥನವು ವಿಜ್ಞಾನದ ತಳಹದಿಯಾಗಿದ್ದು, ಇದರ ಮೇಲೆ ಜ್ಞಾನ ಪೂರಕವಾಗಿ ಬೆಳೆದಿದೆ’ ಎಂದು ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ವಿವರಿಸಿದರು.

‘ಒಂದನೇ ತರಗತಿಯಿಂದ ಹಿಡಿದು ಜೀವನದ ಪ್ರತಿ ಹಂತದಲ್ಲೂ ನೋಡಿ ಕಲಿ, ಮಾಡಿ ತಿಳಿ ಎಂಬ ಮಾತಿನಂತೆ ಕಲಿಕೆಯ ಗಟ್ಟಿತನ ಕಾಣಬೇಕಾದರೆ ಕಲಿಕೆ ನಿರಂತರವಾಗಬೇಕು. ಆಗ ಮಾತ್ರ ವಿಜ್ಞಾನ ಫಲಪ್ರದವಾಗುತ್ತದೆ’ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕ ಶರಣಪ್ಪ ಗಬ್ಬೂರ್ ತಿಳಿಸಿದರು.

‘ಸರ್ಕಾರ ನೀಡುವ ಪರಿಸರ ಉತ್ತಮ ಶಾಲೆ ಪ್ರಶಸ್ತಿ ಗಮನಿಸಿದರೆ ವಿಜ್ಞಾನದ ಜಾಗೃತಿ ಅರಿವಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಚಟುವಟಿಕೆಗಳನ್ನು ನಡೆಸಿದಾಗ ವಿದ್ಯಾರ್ಥಿಗಳು ಅಧ್ಯಯನಶೀಲರಾಗುತ್ತಾರೆ. ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳಿಂದ ತಿಂಗಳಿಗೊಮ್ಮೆ ಚರ್ಚಾಗೋಷ್ಠಿ ಆಯೋಜಿಸಬೇಕು’ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.