ADVERTISEMENT

ಕೋಲಾರ: ರಸ್ತೆಗೆ ಮೋರಿಯ ಕೊಳಚೆ ನೀರು!

ವಿಜಯನಗರ ಬಡಾವಣೆಯಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆ, ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:24 IST
Last Updated 6 ಡಿಸೆಂಬರ್ 2025, 8:24 IST
ಕೋಲಾರ ಹೊರವಲಯದ ವಿಜಯನಗರ ಬಡಾವಣೆಯಲ್ಲಿ ಚರಂಡಿಯ ಕೊಳಚೆ ನೀರು ಹರಿದು ಕೆರೆಯಂತಾಗಿರುವ ರಸ್ತೆ
ಕೋಲಾರ ಹೊರವಲಯದ ವಿಜಯನಗರ ಬಡಾವಣೆಯಲ್ಲಿ ಚರಂಡಿಯ ಕೊಳಚೆ ನೀರು ಹರಿದು ಕೆರೆಯಂತಾಗಿರುವ ರಸ್ತೆ   

ಕೋಲಾರ: ನಗರ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ ಗಾರ್ಡನ್‌) ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಕೆಸರು ಗದ್ದೆಯಂತಾಗಿದೆ.

ಸುತ್ತಮುತ್ತ ನಿವಾಸಿಗಳು ಕಳೆದ ಆರು ತಿಂಗಳಿಂದ ನರಕಯಾತನೆ ಅನುಭವಿಸುತ್ತಿದ್ದು, ಈವರೆಗೆ ಸಮಸ್ಯೆ ಆಲಿಸಿಲ್ಲ. ರಸ್ತೆ ಹಾಗೂ ಮೋರಿ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ಮಹಿಳೆಯರು, ವಯಸ್ಕರು ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ. ಶಾಲಾ ಮಕ್ಕಳು ಹಲವಾರು ಬಾರಿ ಬಿದ್ದಿದ್ದಾರೆ. ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹರಿಹಾಯ್ದರು.

ADVERTISEMENT

ರಸ್ತೆ ಪಕ್ಕದಲ್ಲಿರುವ ಮೋರಿಯಲ್ಲಿ ಕೊಳಚೆ ನೀರು ತುಂಬಿದ್ದು, ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಕೊಳಚೆ ನೀರಿನ ಜೊತೆ ತ್ಯಾಜ್ಯವೂ ತುಂಬಿಕೊಂಡಿದೆ. ಹೀಗಾಗಿ, ನೀರು ಉಕ್ಕಿ ರಸ್ತೆಗೆ ಹರಿಯುತ್ತಿದೆ.

ವಿಪರೀತ ವಾಸನೆ ಬರುತ್ತಿದೆ. ಮನೆಯಲ್ಲಿ ಊಟ, ತಿಂಡಿ ಮಾಡಲು ಸಾಧ್ಯವಾಗುತ್ತಿಲ್ಲ. ಕೊಳಚೆ ನೀರು ಬಹಳ ದಿನಗಳಿಂದ ಒಂದೇ ಕಡೆ ನಿಂತಿರುವುದರಿಂದ ಸೊಳ್ಳೆ ಕಾಟ ಹೆಚ್ಚಿದ್ದು, ರೋಗಗಳು ಬರುವ ಆತಂಕ ಉಂಟಾಗಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಅಕ್ಕಪಕ್ಕದ ಜಮೀನಿಗೂ ಮೋರಿ ನೀರು ನುಗ್ಗಿತ್ತು. ಮಳೆ ನೀರು ಹಾಗೂ ಮೋರಿ ನೀರು ಹೋಗಲು ಜಾಗ ಇಲ್ಲದಿರುವುದು ಇದಕ್ಕೆ ಕಾರಣ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಬಾಬು ಮಾತನಾಡಿ, ಕೆಲ ತಿಂಗಳ ಹಿಂದೆ ಶಾಸಕರು ಬಂದು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಹೋಗಿದ್ದರು. ನಮ್ಮ ಬಡಾವಣೆಯ ಚರಂಡಿ ವ್ಯವಸ್ಥೆ ಸರಿಹೋಗುತ್ತದೆ ಎಂದು ಖುಷಿಯಾಗಿತ್ತು. ಆದರೆ, ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಎಲ್ಲಾ ಮನೆಯವರಿಗೆ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದರು.

ಮನೆ ಮುಂದಿನ ಟ್ಯಾಂಕ್‌ಗಳಿಗೂ (ಸಂಪ್‌) ನೀರು ನುಗ್ಗಿ ವಾಸನೆ ಬರುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಿಇಒ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಸ್ಥಳೀಯರಾದ ಆನಂದ್, ಉಮಾ, ರುಕ್ಮಿಣಿ, ಋತುಶ್ರೀ, ಕಾವ್ಯಾ, ಮರಿಯಪ್ಪ, ರಘು, ವಿಕಾಸ್ ಜಯರಾಮ್ ಇದ್ದರು.

ವಿಜಯನಗರ ಬಡಾವಣೆಯ ಕೆಲ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು
ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದು

ಕಾಮಗಾರಿ ನಡೆಯುತ್ತಿದ್ದು ಸರಿ ಹೋಗಲಿದೆ ಈಗಾಗಲೇ ಈ ಸಮಸ್ಯೆಯನ್ನು ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಗಮನಕ್ಕೆ ತರಲಾಗಿದೆ. ಸಮಸ್ಯೆ ಇದ್ದು ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಅಗಿದೆ. ಆದರೆ ಕಾಮಗಾರಿ ನಡೆಯುವಾಗ ಇಂಥ ಸಮಸ್ಯೆ ಸಾಮಾನ್ಯ. ಈಗಾಗಲೇ ಕೆಲಸ ನಡೆಯುತ್ತಿದ್ದು ಮಳೆಯ ಕಾರಣ ನಿಂತಿದೆ. ಕೆಲವೇ ದಿನಗಳಲ್ಲಿ ಸರಿ ಹೋಗಲಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯನಗರ ಮಂಜುನಾಥ್‌ ಸ್ಪಷ್ಟಪಡಿಸಿದರು. ಜೆಡಿಎಸ್‌ ಹಾಗೂ ಬಿಜೆಪಿಯ ಕೆಲವರು ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಯಾವತ್ತೂ ಯೋಚನೆ ಮಾಡಲಿಲ್ಲ. ಈಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. 30 ವರ್ಷಗಳಿಂದ ಯಾರೂ ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ. ಶಾಸಕರು ಚುನಾವಣೆಯಲ್ಲಿ ಮಾತು ಕೊಟ್ಟಂತೆ ರಸ್ತೆ ಮೋರಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಒಟ್ಟು ₹ 2.75 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಿಸುತ್ತಿದ್ದು ಪಂಚಾಯಿತಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.