ADVERTISEMENT

ಮಳಿಗೆ ಹರಾಜು ಕ್ರಮ ಖಂಡನೀಯ

ನಗರಸಭೆ ಅಧಿಕಾರಿಗಳ ವಿರುದ್ಧ ವಾಣಿಜ್ಯ ಮಳಿಗೆ ಮಾಲೀಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 16:38 IST
Last Updated 13 ಜೂನ್ 2020, 16:38 IST

ಕೋಲಾರ: ‘ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳ್ಳದಿದ್ದರೂ ನಗರಸಭೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಂದಾಗಿದ್ದಾರೆ’ ಎಂದು ನಗರಸಭೆ ವಾಣಿಜ್ಯ ಮಳಿಗೆಗಳ ಮಾಲೀಕರ ಸಂಘದ ಸದಸ್ಯ ಲಕ್ಷ್ಮೀನಾರಾಯಣ ದೂರಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರಸಭೆ ವಾಣಿಜ್ಯ ಮಳಿಗೆಗಳನ್ನು ಹರಾಜು ಹಾಕಲು ಮುಂದಾಗಿರುವ ಅಧಿಕಾರಿಗಳ ಕ್ರಮ ಖಂಡನೀಯ. ಅಧಿಕಾರಿಗಳು ಮಳಿಗೆ ಹರಾಜು ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಬಿ.ಎಂ.ಮುಬಾರಕ್ ನಗರಸಭೆ ಅಧ್ಯಕ್ಷರಾಗಿದ್ದರು. ಆಗ ನಗರಸಭೆ ಸಾಮಾನ್ಯ ಸಭೆಯಲ್ಲಿ ನಮಗೆ 12 ವರ್ಷದ ಅವಧಿಗೆ ಮಳಿಗೆಗಳನ್ನು ಬಾಡಿಗೆಗೆ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಬಾಡಿಗೆ ಕರಾರು ನವೀಕರಣ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಮಳಿಗೆ ಬಾಡಿಗೆಯನ್ನು ಶೇ 300ರಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಸಭೆಯ ನಿರ್ಧಾರಕ್ಕೆ ನಾವು ಒಪ್ಪಿ ಕೆಲ ಮಾಲೀಕರ ₹ 50 ಸಾವಿರ, ಮತ್ತೆ ಕೆಲ ಮಾಲೀಕರು ₹ 1 ಲಕ್ಷ ಮುಂಗಡ ಹಣ ಕೊಟ್ಟಿದ್ದೆವು. ಆದರೆ, ನಗರಸಭೆ ಆಯುಕ್ತರು ಸಾಮಾನ್ಯ ಸಭೆ ನಿರ್ಣಯ ಧಿಕ್ಕರಿಸಿ ಮಳಿಗೆ ಹರಾಜು ಮಾಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ: ‘ಕರಾರಿನ ಪ್ರಕಾರ ಇನ್ನೂ 7 ವರ್ಷದ ಕಾಲಾವಧಿ ಇದ್ದರೂ ನಗರಸಭೆ ಅಧಿಕಾರಿಗಳು ಮಳಿಗೆಗಳನ್ನು ಮರು ಹರಾಜು ಮಾಡಲು ಮುಂದಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌್ ಮೆಟ್ಟಿಲೇರಿದ್ದೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗಲೇ ಅಧಿಕಾರಿಗಳು ವಿನಾಕಾರಣ ಮಳಿಗೆ ಮಾಲೀಕರಿಗೆ ತೊಂದರೆ ನೀಡುತ್ತಾರೆ’ ಎಂದು ಸಂಘದ ಸದಸ್ಯ ಮುಜಾಮಿಲ್‌ ಕಿಡಿಕಾರಿದರು.

‘ಅಧಿಕಾರಿಗಳು ಹಿಂದಿನ ಬಾಡಿಗೆ ಕರಾರಿನ ಪ್ರಕಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕುಟುಂಬ ಸದಸ್ಯರೊಂದಿಗೆ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ. ಅಧಿಕಾರಿಗಳು ನಮಗೆ ಮತ್ತು ಕುಟುಂಬ ಸದಸ್ಯರಿಗೆ ವಿಷ ಕೊಟ್ಟು ಬಳಿಕ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲಿ’ ಎಂದು ಗುಡುಗಿದರು.

ಸಂಘದ ಸದಸ್ಯರಾದ ಲಕ್ಷ್ಮೀನಾರಾಯಣ, ಸುಧಾಕರ್, ಪ್ರಸನ್ನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.