ADVERTISEMENT

ಕೋಲಾರ ‌| ಕಾನೂನಿನಿಂದ ಹಿಂದುತ್ವ ವಿಚಾರ ತಡೆ ಅಸಾಧ್ಯ: ಶ್ರೀಕಾಂತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:12 IST
Last Updated 2 ಫೆಬ್ರುವರಿ 2026, 7:12 IST
ಕೋಲಾರದಲ್ಲಿ ನಡೆದ ಹಿಂದೂ ಸಮಾಜೋತ್ಸವ ಉದ್ಘಾಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಶೆಟ್ಟಿ ಕಾರ್ಕಳ, ಚಿನ್ಮಯ ಸಾಂದೀಪನಿ ಆಶ್ರಮದ ದತ್ತಾಪಾದಾನಂದ ಸ್ವಾಮೀಜಿ, ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ, ಸಮಿತಿಯ ವೆಂಕಟೇಶ್, ಡಾ.ವಂದನಾ ಪಾಲ್ಗೊಂಡಿದ್ದರು
ಕೋಲಾರದಲ್ಲಿ ನಡೆದ ಹಿಂದೂ ಸಮಾಜೋತ್ಸವ ಉದ್ಘಾಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಶೆಟ್ಟಿ ಕಾರ್ಕಳ, ಚಿನ್ಮಯ ಸಾಂದೀಪನಿ ಆಶ್ರಮದ ದತ್ತಾಪಾದಾನಂದ ಸ್ವಾಮೀಜಿ, ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ, ಸಮಿತಿಯ ವೆಂಕಟೇಶ್, ಡಾ.ವಂದನಾ ಪಾಲ್ಗೊಂಡಿದ್ದರು    

ಕೋಲಾರ: ಹಿಂದುತ್ವ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಕಾನೂನಿನ ಮೂಲಕ ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಂಥ ಭಂಡತನ ಬಿಟ್ಟುನಿಡಿ. ನಾವು ‌ಫುಟ್‌ಬಾಲ್‌ ಇದ್ದಂತೆ, ಒದ್ದಷ್ಟೂ ಎತ್ತರಕ್ಕೆ ಪುಟಿದೇಳುತ್ತೇವೆ. ಅದು ಬರೀ ಚೆಂಡು ಅಲ್ಲ; ಹಿಂದುತ್ವದ ಬೆಂಕಿ ಚೆಂಡು ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ಹಿಂದೂ ಸಮಾಜೋತ್ಸವ ಸಮಾವೇಶದಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರನ್ನು ಉದ್ದೇಶೀಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಆರಂಭವಾಗಿದ್ದೇ ವಿರೋಧಗಳ ನಡುವೆ. ಅನೇಕ ಆರೋಪ ಬಂದರೂ ಸಂಘ ಯಾವತ್ತೂ ವಿಚಲಿತವಾಗಿಲ್ಲ, ಯಾವುದೇ ಬೆದರಿಕೆಗಳಿಗೆ ಬಗ್ಗಿಲ್ಲ. 17 ಮಂದಿಯಿಂದ ಶುರುವಾದ ಸಂಘ ಇಂದು 40 ದೇಶಗಳಲ್ಲಿ ಕೆಲಸ ಮಾಡುತ್ತಿದೆ, ಲಕ್ಷಾಂತರ ಕಾರ್ಯಕರ್ತರು ಎಂದರು.

ADVERTISEMENT

ಭಾರತದೆಡೆಗೆ ಇಡೀ ಜಗತ್ತಿನ ಗಮನ ಹರಿಯಲು ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ.‌ ಅವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಾವಿರಾರು ಹಿಂದೂ ಕಾರ್ಯಕರ್ತರು ಹೆಗಲು ಕೊಟ್ಟು ನಿಂತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸಂಘದ ಸೇವಕರು ಗಲ್ಲಿಗಲ್ಲಿಯಲ್ಲಿ ರಾರಾಜಿಸಿ ಹಿಂದೂ ಧರ್ಮ ಬಲಿಷ್ಠಗೊಳಿಸಬೇಕು. ಊರು ಊರುಗಳಲ್ಲಿ ಸಂಚರಿಸಿ ಹಿಂದೂ ಜಾಗೃತಿ ಮೂಡಿಸಬೇಕು. ದೇಶದಿಂದ ಯಾವುದೇ ಪ್ರಾಂತ್ಯ ವಿಭಾಗವಾಗದಂತೆ ನೋಡಿ ಕೊಳ್ಳಬೇಕು ಎಂದು ತಿಳಿಸಿದರು.

ಈ ನಾಡನ್ನು ಸುಡೋ ಸೆಕ್ಯೂಲರಿಸಂ ಹಾಳು ಮಾಡಿತು. ಹಿಂದೂ ಸಂಸ್ಕೃತಿ ಸಾರುವ ದೇವಾಲಯಗಳನ್ನು ಹಾಳುಕೊಂಪೆ ಮಾಡಿದರು. ಇತಿಹಾಸ ಮರುಕಳಿಸದಿರಲು ನಮ್ಮತನ ಅರಿಯಬೇಕು. ನಮ್ಮ ಸಮಾಜ ಬಲಿಷ್ಠಗೊಳಿಸಬೇಕು.‌‌ ರಾಷ್ಟ್ರಪ್ರೇಮ ಬೆಳೆಸಬೇಕು ಎಂದರು.

ಸಂಘಟನೆ ಇಲ್ಲದಿದ್ದರೆ ಧರ್ಮವನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಐದು ಪಂಚ ಪರಿವರ್ತನೆಗಳನ್ನು ಪಾಲಿಸಬೇಕಿದೆ. ನನ್ನತನ ಜಾಗೃತಗೊಳ್ಳಬೇಕಿದೆ. ಹಿಂದೂ ರಾಷ್ಟ್ರ, ಹಿಂದುತ್ವ, ‌ಹಿಂದುತನ ಉಳಿಸುವ ಕೆಲಸ ‌ನಡೆಯಬೇಕು.‌ ಸ್ವದೇಶಿತನದ ಅಭಿವೃದ್ಧಿ ಅಗತ್ಯ‌ ಇದೆ. ರಾಷ್ಟ್ರೀಯ ವಿಚಾರಗಳಿಗೆ ಮಕ್ಕಳನ್ನು ಒಡ್ಡಬೇಕು. ಕುಟುಂಬದ ಮಹತ್ವ ಹೇಳಬೇಕು. ಭಜನೆ ಮಾಡಬೇಕು, ಪ್ರಕೃತಿ ಉಳಿಸಬೇಕು ಎಂದು ಸಲಹೆ ನೀಡಿದರು.

ನಾಗಲಾಪುರ ಮಠದ ತೇಜಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 'ಹಿಂದೂಗಳಿಗೆ ಇರುವುದು ಏಕೈಕ ದೇಶ ಭಾರತ. ನಮ್ಮದು ಬಲಿಷ್ಠ ದೇಶ. ಇದು ಆಧಾತ್ಯಕ ಹಾಗೂ ಧಾರ್ಮಿಕತೆ ಮೇಲೆ ನಿಂತಿದೆ. ಇಂಥ ಸಂಸ್ಕೃತಿ ಹಾಗೂ ಪರಂಪರೆ ಬೇರೆ ಯಾವುದೇ ದೇಶದಲ್ಲಿ‌ ಇಲ್ಲ‌. ದೇಶಾಭಿಮಾನ ಬೆಳೆಸಿ ಕೊಂಡರೆ ದೇಶ ಎತ್ತರಕ್ಕೆ‌ ಬೆಳೆಯುತ್ತದೆ ಎಂದರು.

ಹಿಂದೂ ಸಮಾಜೋತ್ಸವ ಮೂಲಕ ಪರಂಪರೆ ‌ಎತ್ತಿ ಹಿಡಿಯುವ ಕೆಲಸ ನಡೆಯುತ್ತಿದೆ. ಪ್ರತಿ ಮನೆಗಳಲ್ಲಿ‌ ಹಿಂದೂ ಧರ್ಮದ ಪ್ರೀತಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಚೊಕ್ಕಹಳ್ಳಿಯ ಚಿನ್ಮಯ ಸಾಂದೀಪನಿ ಆಶ್ರಮದ ದತ್ತಪಾದಾನಂದ ಸ್ವಾಮೀಜಿ ಮಾತನಾಡಿ, ‘ನಮ್ಮ ಸಂಸ್ಕೃತಿಯ ಸಭ್ಯತೆ ಎಂದರೆ ಶಾಂತ ಸ್ವಭಾವ. ಹಿಂದೂಗಳ ‌ಬಗ್ಗೆ‌ ಎಲ್ಲೂ ಅಪಸ್ವರ ಇಲ್ಲ. ಈ ಸಮಾಜ ಒಡೆಯಲು ಪ್ರಯತ್ನ ನಡೆದಿದೆ’ ಎಂದರು.

ಜಾತಿ ಜಾತಿಗಳ‌ ನಡುವೆ ಸಂಘರ್ಷ ಉಂಟು ಮಾಡುವ ಕಾನೂನು, ಕಾಯ್ದೆ ಬೇಡ. ಸಮಾಜ ಜಾಗೃತ ‌ಆಗಬೇಕಿದೆ. ಮತ್ತೆ ಮಲಗುವುದು ಬೇಡ. ನಮ್ಮಿಂದಲೇ‌ ಜಾಗೃತಿ ಪ್ರಾರಂಭವಾಗಲಿ‌. ಅದಕ್ಕೆ ಭಾರತಮಾತೆ‌ ಶಕ್ತಿ ನೀಡಲಿ ಎಂದು ಆಶಿಸಿದರು.

ಸಮಾಜೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ವೆಂಕಟೇಶ್ ಮಾತನಾಡಿ,‌ ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮ ಹಿಂದೂ ಧರ್ಮ ಎಂದರು.

ಜಿಲ್ಲಾ ಕಾರ್ಯನಿರತ‌‌ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು‌. ಶಂಕರಮಠ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ, ರಾಮಕೃಷ್ಣಭಟ್ಟರು ವೇದಘೋಷ ಮೊಳಗಿಸಿದರು.

ಹಿಂದೂ ಸಮಾಜೋತ್ಸವದ ಉಪಾಧ್ಯಕ್ಷೆ ಡಾ.ವಂದನಾ ಕೃಷ್ಣ, ಸಮಿತಿಯ ಕಾರ್ಯದರ್ಶಿ ಎಚ್‌.ಉದಯಕುಮಾರ್, ಗುಣಶೇಖರ್, ಸಿ.ಎಸ್.ರಾಮಚಂದ್ರ, ಡಾ.ಶಂಕರ್‌ ನಾಯಕ್, ಡಾ.ಜನಾರ್ದನ್,‌ ಮಂಜುಳಾ,‌ ‌ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್, ಮಾಜಿ ಎಂಎಲ್ಸಿ ‌ವೈ.ಎ.ನಾರಾಯಣಸ್ವಾಮಿ, ಜೆಡಿಎಸ್‌ ಮುಖಂಡ ಸಿಎಂಆರ್.ಶ್ರೀನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ಕುರ್ಕಿ ರಾಜೇಶ್ವರಿ, ಬಿಜೆಪಿ ವಕ್ತಾರ ಎಸ್‍.ಬಿ.ಮುನಿವೆಂಕಟಪ್ಪ, ಮುಖಂಡರಾದ ಡಿ.ವಿ.ಹರೀಶ್, ಮುಖಂಡರಾದ ಪ್ರವೀಣ್‍ಗೌಡ, ಪ್ರಶಾಂತ್‌, ಬಜರಂಗದಳದ ಬಾಲಾಜಿ, ಬಾಬು, ಅಪ್ಪಿ, ವಿಜಯಕುಮಾರ್, ತಿಮ್ಮರಾಯಪ್ಪ, ಮಮತಾ, ಬಾಲಾಜಿ ಇದ್ದರು.

ಹಿಂದೂ ಸಮಾಜೋತ್ಸವ ಸಮಾವೇಶದಲ್ಲಿ ಕಲಾವಿದರಿಂದ ನೃತ್ಯ ರೂಪಕ
ದೇಶ ಆಳುತ್ತಿರುವ ಪ್ರಧಾನಿ ಸ್ಥಾನದಲ್ಲಿ ಕುಳಿತಿರುವವರು ಕೂಡ ಎದೆ ಮೇಲೆ ಕೈ ಇಟ್ಟು ‘ನಮಸ್ತೇ ಸದಾ ವತ್ಸಲೆ ಮಾತೃಭೂಮೇ’ ಎಂದೇಳುವ ಭಾರತಮಾತೆ ಸುಪುತ್ರ. ಅದು ಆರ್‌ಎಸ್‌ಎಸ್‌ ತಾಕತ್ತು
ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಿಂದೂ ಜಾಗರಣಾ ವೇದಿಕೆ

ಹಿಂದೂ ವಿರೋಧಿ ನೀತಿಯಿಂದ ಪ್ರಭಾಕರ್‌ ಭಟ್‌

ಬಂದಿಲ್ಲ ರಾಜ್ಯ ಸರ್ಕಾರದ ಹಿಂದೂ ವಿರೋಧಿ‌ ನೀತಿಯಿಂದಾಗಿ ‌ಕಲ್ಲಡ್ಕ ಪ್ರಭಾಕರ್‌ ಭಟ್ ಬಂದಿಲ್ಲ. ಹೀಗಾಗಿ ಅವರ ಬಂದಲು ನಾನು ಬಂದಿದ್ದೇನೆ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು. ಹಿಂದುತ್ವ ಪರ ವಿಚಾರ ಮಾತನಾಡುತ್ತಾರೆಂದು ಅವರನ್ನು ನಿರ್ಬಂಧಿಸಲಾಗುತ್ತಿದೆ. ನಾನಾ ರೀತಿ ತೊಂದರೆ ಕೊಡಲಾಗುತ್ತಿದೆ. ಕಾನೂನಿನ ಮೂಲಕ ತಡೆಯುವ ಪ್ರಯತ್ನ ನಡೆದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿಚಾರಗಳು ಬೆಂಕಿ ಇದ್ದಂತೆ. ಅದನ್ನು ಹೊಸಕಿ ಹಾಕಲು ಯಾರಿಂದಲೂ ಆಗಲ್ಲ ಎಂದರು.

ತಾಜ್‌ಮಹಲ್‌ ಅಲ್ಲ; ಶ್ರೀರಾಮ ಪ್ರೇಮದ ಪ್ರತೀಕ

ಹಿಂದೆ ತಾಜ್‌ಮಹಲ್‌ ಪ್ರಸಿದ್ಧ ಪ್ರವಾಸಿ ತಾಣ ಎನಿಸಿಕೊಂಡಿತ್ತು. ಹೊರದೇಶಗಳಿಂದ ಬರುವ ಪ್ರವಾಸಿಗರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗುತಿತ್ತು. ತಾಜ್ ಮಹಲ್ ಪ್ರೇಮದ ಪ್ರತೀಕ ಅಲ್ಲ; ಹೆಣ್ಣಿನ ಮೇಲೆ ನಡೆದ ‌ಅತ್ಯಾಚಾರದ‌ ಪ್ರತೀಕ. ನಮಗೆ ಶ್ರೀರಾಮ ಪ್ರೇಮದ ಪ್ರತೀಕ. ಈಗ ದೇಶದ ಅತಿ ದೊಡ್ಡ ಪ್ರವಾಸಿ ತಾಣ ಅಯೋಧ್ಯೆಯ ಶ್ರೀರಾಮ‌ ಮಂದಿರವಾಗಿದೆ. 11 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದರು.

ದಲಿತರನ್ನು ತುಚ್ಛವಾಗಿ ಕಾಣಲಾಗುತ್ತಿದೆ

ಹಿಂದೂಗಳೇ ಆಗಿರುವ ದಲಿತರೊಂದಿಗೆ ನಮ್ಮ ವ್ಯವಹಾರ ಹೇಗಿದೆ? ನಾವು ಪೂಜಿಸುವ ರಾಮ ಕೃಷ್ಣರು ದಲಿತರಿಗೂ ಆರಾಧ್ಯ ಮೂರ್ತಿಗಳು. ಆದರೆ ಎಷ್ಟೊ ದೇಗುಲಗಳ ಪ್ರವೇಶ‌ಕ್ಕೆ ದಲಿತ‌ ಸಮಾಜಕ್ಕೆ ಅವಕಾಶ ನೀಡುತ್ತಿಲ್ಲ. ಯಾರೋ ಗೋಭಕ್ಷರನ್ನು ಕೋಣೆಯೊಳಗೆ ಬಿಟ್ಟುಕೊಳ್ಳುತ್ತೇವೆ. ಆದರೆ ದಲಿತರನ್ನು ಮನೆಯೊಳಗೆ‌ ಬಿಡಲ್ಲ. ಅವರ ಬಗ್ಗೆ ತುಚ್ಛವಾಗಿ ಕಾಣಲಾಗುತ್ತಿದೆ. ನಾವೆಲ್ಲರೂ ಒಂದು ಎಂಬ ಭಾವನೆ ಕ್ಷೀಣವಾಗುತ್ತಿದೆ. ಈ ರೀತಿಯ ಪ್ರವೃತ್ತಿಯಿಂದ ಹಿಂದೂ ಸಮಾಜ ದುರ್ಬಲವಾಗುತ್ತಿದೆ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.