ADVERTISEMENT

ಬಂಗಾರಪೇಟೆ: 11ರಂದು ತಾಲ್ಲೂಕು ಕಚೇರಿಗೆ ಮುತ್ತಿಗೆ

ಬೆಂಗಳೂರು–-ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿಯಿಂದ ಕೆರೆಗಳಿಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:07 IST
Last Updated 8 ಏಪ್ರಿಲ್ 2022, 3:07 IST
ಬಂಗಾರಪೇಟೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಕೆರೆಗಳ ಉಳಿವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಬಂಗಾರಪೇಟೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಕೆರೆಗಳ ಉಳಿವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಬಂಗಾರಪೇಟೆ: ಕೆರೆಗಳ ಉಳಿವಿಗಾಗಿ ಏ. 11ರಂದು ಪಟ್ಟಣದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಸಂಘದ ಸದಸ್ಯರ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರು-ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿಯಿಂದ ಜಿಲ್ಲೆಯ ಕೆರೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ಕೆರೆಗಳಲ್ಲಿ ಸುಮಾರು 20 ಅಡಿಗಿಂತ ಹೆಚ್ಚಿನ ಆಳ ಅಗೆದು ಮಣ್ಣು ತೆಗೆಲಾಗುತ್ತಿದೆ. ಈ ಬಗ್ಗೆ ಅರಿವಿದ್ದರೂ ತಾಲ್ಲೂಕು, ಜಿಲ್ಲಾಡಳಿತ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಗಣಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಸಂಬಂಧಿಸಿದ ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಕೂಡಲೇ ಕೆರೆಗಳ ಉಳಿವಿಗೆ ಕೈಜೋಡಿಸಬೇಕು. ಸ್ಪಂದಿಸದಿದ್ದರೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದರು.

ಕಾರಿಡಾರ್ ರಸ್ತೆಗೆ ಜೇಡಿಮಣ್ಣು ಹಾಕಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಇಂಧನ ಬೆಲೆ ನಿಯಂತ್ರಿಸಿ: ದಿನೇ ದಿನೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌, ಅಡುಗೆ ಎಣ್ಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್, ಮಹಿಳಾ ಅಧ್ಯಕ್ಷೆ ಮಾಗೊಂದಿ ರತ್ನಮ್ಮ, ಪ್ರಧಾನ ಕಾರ್ಯದರ್ಶಿ ಮರಗಲ್ ಎಂ.ಎನ್. ರಾಜಶೇಖರ್, ಗೌರವಾಧ್ಯಕ್ಷ ಐತಾಂಡಹಳ್ಳಿ ಮುನಿಯಪ್ಪ, ಕೋಲಾರ ತಾಲ್ಲೂಕು ಅಧ್ಯಕ್ಷ ಕೆಂಬೋಡಿ ರವಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಜಿ.ಎನ್. ಗಣೇಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಕಳ್ಳಿಕುಪ್ಪ ಗೋಪಾಲ್, ಮಾಲೂರು ತಾಲ್ಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಲೋಕೇಶ್, ಹರೀಶ್, ಸುನೀಲ್, ಹಂಬ್ಲಿಕಲ್ ವಿ. ನಾಗೇಶ್, ಚಿನ್ನಪನ್ನಂಡಹಳ್ಳಿ ಆನಂದ್, ತಿಮ್ಮೆಗೌಡ, ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.