ADVERTISEMENT

ಹವಾಮಾನ ವೈಪರೀತ್ಯ: ಕೈಗೆ ಸಿಗದ ರೇಷ್ಮೆ ಬೆಳೆ

ರೇಷ್ಮೆ ಸೊಪ್ಪು, ಹುಳುವಿಗೆ ರೋಗ: ಬೆಲೆಯೂ ಇಲ್ಲ, ಇಳುವರಿಯೂ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:10 IST
Last Updated 3 ಜನವರಿ 2026, 7:10 IST
ಹಿಪ್ಪು ನೇರಳೆ ಸೊಪ್ಪಿಗೆ ಸುಳಿ ಕೊರೆತ ರೋಗ
ಹಿಪ್ಪು ನೇರಳೆ ಸೊಪ್ಪಿಗೆ ಸುಳಿ ಕೊರೆತ ರೋಗ   

ವೇಮಗಲ್: ವಿಪರೀತ ಮಂಜು, ಚಳಿ, ಮೋಡ ಮುಸುಕಿದ ವಾತಾವರಣ ರೇಷ್ಮೆ ಬೆಳಗಾರರಿಗೆ ಕಂಟಕವಾಗಿ ಪರಿಣಮಿಸಿದೆ.

ರೇಷ್ಮೆ ಹುಳು ಸಾಕಾಣಿಕೆಗೆ ನಿರ್ಧಿಷ್ಟ ತಾಪಮಾನ ಅವಶ್ಯಕ. ಆದರೆ, ಪ್ರಸ್ತುತ ಹವಾಮಾನವು ರೋಗಗಳು ಹರಡಲು ಸಹಾಯಕವಾಗಿದೆ. ಹಾಗಾಗಿ ಸೊಪ್ಪಿಗೆ ಸುಳಿ ಕೊರೆತ ರೋಗ ಹಾಗೂ ಹುಳುಗಳಲ್ಲಿ ಸುಣ್ಣಕಟ್ಟು, ಸಪ್ಪೆ ರೋಗ ಮತ್ತು ಹಾಲು ತೊಂಡೆ ರೋಗಗಳು ಕಾಣಿಸಿಕೊಂಡಿವೆ. ಹಾಗಾಗಿ ಹುಳುಗಳು ಗೂಡು ಕಟ್ಟುವ ಮೊದಲೇ ಸಾವನ್ನಪ್ಪುತ್ತಿವೆ. ಇದರಿಂದ ಬೆಳೆದ ಬೆಳೆ ರೈತರ ಕೈಗೆ ಸಿಗದೆ ಸಾಲದ ಸುಳಿಗೆ ಸಿಲುಕುವಂತಾಗಿದೆ.

ಸಾಮಾನ್ಯವಾಗಿ ರೇಷ್ಮೆ ಹುಳು ನಾಲ್ಕನೇ ಜ್ವರ ಮುಗಿಸಿದ ನಂತರ 7 ರಿಂದ 8 ದಿನಗಳಲ್ಲಿ ಗೂಡು ಕಟ್ಟಲು ಸಿದ್ಧವಾಗುತ್ತದೆ. ಆದರೆ, ಚಳಿಯಿಂದಾಗಿ ಹಣ್ಣಾಗುವ ಪ್ರಕ್ರಿಯೆ 10 ರಿಂದ 13 ದಿನಗಳಿಗೆ ಏರಿಕೆಯಾಗಿದೆ. ಇದರಿಂದ ಹೆಚ್ಚುವರಿ ಐದು ದಿನ ಹುಳುಗಳಿಗೆ ಸೊಪ್ಪು ನೀಡಲೇಬೇಕಾಗಿದೆ. ಅದರಿಂದ ರೈತರು ತಮ್ಮ ಹೊಲದಲ್ಲಿರುವ ಸೊಪ್ಪು ಖಾಲಿಯಾಗಿ ಬೇರೆ ಕಡೆಯಿಂದ ಸೊಪ್ಪನ್ನು ದುಬಾರಿ ಬೆಲೆಗೆ ಖರೀದಿಸಿ ತರುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ರೋಗಬಾಧೆಯಿಂದ ಇಳುವರಿ ಕಡಿಮೆಯಾಗಿದೆ. ಗೂಡು ಗುಣಮಟ್ಟದಿಂದ ಇರದ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತಿಲ್ಲ. ನೂಲು ಬಿಚ್ಚಣಿಕೆದಾರರು ಗೂಡು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬು ರೇಷ್ಮೆ ಬೆಳೆಗಾರರ ಅಳಲಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳು ರೇಷ್ಮೆ ಬೆಳೆಗಾರರನ್ನು ಕಾಡುತ್ತಿದ್ದರೆ ತಮಗೂ ಇದಕ್ಕೆ ಸಂಬಂಧ ಇಲ್ಲವೆಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ರೋಗ ಹರಡುವ ಸಂದರ್ಭದಲ್ಲಿ ಬೆಳೆಗಾರರ ಮನೆಗಳಿಗೆ ಭೇಟಿ ಯಾವ ಔಷಧ ಸಿಂಪಡಿಸಬೇಕು ಎಂಬ ಮಾಹಿತಿ ನೀಡುತ್ತಿಲ್ಲ. ಜೊತೆಗೆ ಸಮಸ್ಯೆ ಹೇಳಿಕೊಂಡು ಕಚೇರಿ ಬಳಿ ಹೋದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ರೇಷ್ಮೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಶೆಟ್ಟಿಹಳ್ಳಿ ಗ್ರಾಮದ ರೈತರ ತೋಟದಲ್ಲಿ ಹಿಪ್ಪು ನೇರಳೆ ಸೊಪ್ಪಿಗೆ ಸುಳಿ ಕೊರೆತ ಹುಳುಗಳ ಬಾಧೆ

ಹುಳು ಸಾಕಣೆ ಮನೆಯ ಉಷ್ಣಾಂಶ ಕಾಪಾಡಿಕೊಳ್ಳಿ

ಜಿಲ್ಲೆಯ ವಾತಾವರಣದಲ್ಲಿ ಚಳಿ ಹೆಚ್ಚಾಗಿರುವುದರಿಂದ ಸಹಜವಾಗಿ ರೇಷ್ಮೆ ಹುಳು ಹಣ್ಣಾಗುವ ಸಮಯ ಕೆಲವು ದಿನಗಳು ನಿಧಾನವಾಗುತ್ತದೆ. ಹಾಗಾಗಿ ರೈತರು ಹುಳು ಸಾಕಾಣಿ ಮನೆಗಳಲ್ಲಿ 25 ರಿಂದ 26 ಡಿಗ್ರಿವರೆಗೆ ಉಷ್ಣಾಂಶ ಕಾಪಾಡಿಕೊಳ್ಳಿ.
– ಬೈರೇಗೌಡ, ರೇಷ್ಮೆ ಸಹಾಯಕ ನಿರ್ದೇಶಕರು ಕೋಲಾರ

ಇಲಾಖೆ ಸೌಲಭ್ಯಗಳ ಮಾಹಿತಿ ಕೊರತೆ

ವೇಮಗಲ್ ಹೋಬಳಿಯಲ್ಲಿ ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗಾಗಿ ಯಾವುದೇ ಸಭೆಗಳನ್ನು ಏರ್ಪಡಿಸಿಲ್ಲ. ಇದರಿಂದ ರೈತರಿಗೆ ರೇಷ್ಮೆ ಇಲಾಖೆಯ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಉನ್ನತ ಅಧಿಕಾರಿಗಳ ಈ ಬಗ್ಗೆ ಗಮನಹರಿಸಬೇಕು
– ಬೈರೇಗೌಡ, ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ರೇಷ್ಮೆ ಬೆಳೆಗಾರರು ಪುರಹಳ್ಳಿ

ವಿಶೇಷ ಪ್ಯಾಕೇಜ್ ಘೋಷಿಸಿ

ರೇಷ್ಮೆ ಬೆಳೆಗಾರರ ಹಿತ ಕಾಯಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಇಲಾಖೆಯ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ತಾಂತ್ರಿಕ ನೆರವು ನೀಡಬೇಕು. ಇಲ್ಲದಿದ್ದರೆ ರೇಷ್ಮೆ ಬೆಳೆಗಾರರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
– ರಾಮು ಶಿವಣ್ಣ, ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ರೇಷ್ಮೆ ಹುಳುಗಳು

ಸಿಬ್ಬಂದಿ ಕೊರತೆ

ವೇಮಗಲ್ ಹೋಬಳಿಯ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಒಟ್ಟು 16 ಮಂದಿ ಕಾರ್ಯನಿರ್ವಹಿಸಬೇಕು. ಆದರೆ ಕೇವಲ ಮೂರು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೋಬಳಿಯಲ್ಲಿ 1849.89 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ. ಹೋಬಳಿಯಲ್ಲಿ ಸುಮಾರು 1950 ರೇಷ್ಮೆ ಬೆಳೆಗಾರರಿದ್ದಾರೆ ಎಂದು ಇಲಾಖೆಯ ಅಂಕಿ ಅಂಶಗಳೇ ತಿಳಿಸುತ್ತವೆ. ಆದರೆ ಬೆರಣೆಕೆ ಸಿಬ್ಬಂದಿಯಿಂದ ಯಾವ ರೀತಿಯ ಪ್ರೋತ್ಸಾಹ ನಿರೀಕ್ಷಿಸಬಹುದು ಎಂಬುದು ರೇಷ್ಮೆ ಬೆಳೆಗಾರರ ಪ್ರಶ್ನೆಯಾಗಿದೆ.