ADVERTISEMENT

ಕೋಳಿ ಫಾರಂಗೆ ನುಗ್ಗಿದ ನೀರು: ಕೊಚ್ಚಿಹೋದ 6 ಸಾವಿರ ಕೋಳಿಗಳು

10.3 ಸೆ.ಮೀ ಮಳೆ; ಮನೆಗಳು ಜಲಾವೃತ್ತ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 1:49 IST
Last Updated 28 ಆಗಸ್ಟ್ 2022, 1:49 IST
ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗಿದ್ದು, ಮೃತಪಟ್ಟಿರುವ ಕೋಳಿಗಳು (ಎಡಚಿತ್ರ) ಕೋಳಿ ಫಾರಂಗೆ ಕೋಲಾರ ತಾಲ್ಲೂಕು ತಹಶೀಲ್ದಾರ್‌ ನಾಗರಾಜ್‌ ಭೇಟಿ ನೀಡಿ ಪರಿಶೀಲಿಸಿದರು
ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗಿದ್ದು, ಮೃತಪಟ್ಟಿರುವ ಕೋಳಿಗಳು (ಎಡಚಿತ್ರ) ಕೋಳಿ ಫಾರಂಗೆ ಕೋಲಾರ ತಾಲ್ಲೂಕು ತಹಶೀಲ್ದಾರ್‌ ನಾಗರಾಜ್‌ ಭೇಟಿ ನೀಡಿ ಪರಿಶೀಲಿಸಿದರು   

ಕೋಲಾರ: ನಗರಮತ್ತುಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಭಾರಿ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 6 ಸಾವಿರ ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ಗ್ರಾಮದ ತಿಮ್ಮೇಗೌಡ ಎಂಬುವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ₹ 12 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಇದಲ್ಲದೇನೀರಿನ ರಭಸಕ್ಕೆ ಸಿಲುಕಿ ಮತ್ತಷ್ಟುಕೋಳಿಗಳು ಮೃತಪಟ್ಟಿವೆ ಎಂದಿದ್ದಾರೆ.

ಚೆಲುವನಹಳ್ಳಿ ಕೆರೆಗೆ ಸಂಪರ್ಕ ಹೊಂದಿರುವ ರಾಜಕಾಲುವೆ ಉಕ್ಕಿ ಜಮೀನಿನ ಮೇಲೆ ನೀರು ಹರಿದು ಕೋಳಿ ಫಾರಂ ಶೆಡ್‌ಗೆ ನುಗ್ಗಿದೆ. ಕೋಲಾರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಈ ಶೆಡ್‌ ಇದೆ.

ADVERTISEMENT

ನಗರದ ಶಾಂತಿನಗರ, ಚೌಡೇಶ್ವರಿನಗರ ಹಾಗೂ ರಹಮತ್‌ ನಗರ ಬಡಾವಣೆಗಳಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ನಿವಾಸಿಗಳು ನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು. ಕಂಪ್ಯೂಟರ್‌ ರಿಪೇರಿ ಮಳಿಗೆಗೆ ನೀರು ನುಗ್ಗಿ ನಷ್ಟ ಉಂಟಾಗಿದೆ.ಎಲೆಕ್ಟ್ರಾನಿಕ್ ಉಪಕರಣಗಳು, ದಿನಸಿ ಪದಾರ್ಥಗಳು ನೀರಿನಲ್ಲಿ ನಾಶವಾಗಿವೆ. ರೈಲ್ವೆ ಮೇಲ್ಸೇತುವೆ ಬಳಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು. ರಸ್ತೆ ಗುಂಡಿಗಳಲ್ಲೂ ನೀರು ತುಂಬಿಕೊಂಡಿದೆ.

ಜಮೀನುಗಳಿಗೂ ನೀರು ನುಗ್ಗಿದ್ದು,‌ಟೊಮೆಟೊ, ರಾಗಿ ಸೇರಿದಂತೆ ತರಕಾರಿ ಬೆಳೆ ನಾಶವಾಗಿವೆ. ಕೋಲಾರಮ್ಮ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ರಾಜಕಾಲುವೆ ಅಕ್ಕ ಪಕ್ಕ ತೋಟಗಳಿಗೆ ಮಳೆ ನೀರು ನುಗ್ಗಿದೆ.ರೈಲು ನಿಲ್ದಾಣ ಪಕ್ಕದ ನಾರಾಯಣಪ್ಪ ಎಂಬುವರಿಗೆ ಸೇರಿದ ಕೊತ್ತಂಬರಿ, ಬಿಟ್‌ರೂಟ್ ಬೆಳೆ ನಾಶವಾಗಿದೆ. ನಗರದ ಆರ್‌ಟಿಒ ಕಚೇರಿ ಸುತ್ತಲೂನೀರು ನಿಂತಿದೆ. ಪಕ್ಕದಲ್ಲಿನ ದೇಗುಲಜಲಾವೃತವಾಗಿದೆ.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. ನಸುಕಿನವರೆಗೆ ಸುರಿಯುತ್ತಲೇ ಇತ್ತು. ‘ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ 10.3 ಸೆ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿರುವ ಪ್ರದೇಶ ಕೂಡ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಾಲೂರು ತಾಲ್ಲೂಕಿನ ಲಕ್ಕೂರಿನಲ್ಲಿ 9.2 ಸೆ.ಮೀ., ಬಂಗಾರಪೇಟೆ ತಾಲ್ಲೂಕಿನ ಗುಲ್ಲಹಳ್ಳಿಯಲ್ಲಿ 6.4 ಸೆ.ಮೀ., ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿಯಲ್ಲಿ 4.8 ಸೆ. ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.