ADVERTISEMENT

ಎಸ್‌ಎನ್‌ಆರ್ ಆಸ್ಪತ್ರೆ ಅವ್ಯವಸ್ಥೆಯ ದಿಗ್ದರ್ಶನ

ಸೋಂಕಿತೆಯ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 15:06 IST
Last Updated 27 ಏಪ್ರಿಲ್ 2021, 15:06 IST

ಕೋಲಾರ: ಕೊರೊನಾ ಸೋಂಕಿತರಾಗಿ ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಅವರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದೃಶ್ಯಾವಳಿಯು ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಅನಾವರಣಗೊಳಿಸಿದೆ.

ಸದ್ಯ ಎಸ್‌ಎನ್‌ಆರ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಗೀತಾ ಅವರು ವೈದ್ಯಕೀಯ ಸಿಬ್ಬಂದಿ ಕೊರತೆ, ವಾರ್ಡ್‌ನಲ್ಲಿ ಕಸದ ಅಸಮರ್ಪಕ ವಿಲೇವಾರಿಗೆ ಸಂಬಂಧಪಟ್ಟಂತೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ.

‘ಆಸ್ಪತ್ರೆಗೆ ದಾಖಲಾಗಿ 4 ತಾಸು ಕಳೆದರೂ ವೈದ್ಯರು ಬಂದು ತಪಾಸಣೆ ಮಾಡಿಲ್ಲ. ನರ್ಸ್‌ ಚುಚ್ಚುಮದ್ದು ಕೊಟ್ಟು ಹೋಗಿದ್ದಾರೆ ಅಷ್ಟೇ. ಐಸಿಯುನಲ್ಲಿ ಇರುವ ಇತರೆ ಸೋಂಕಿತರಿಗೂ ತಪಾಸಣೆ ಮಾಡಿಲ್ಲ. ಐಸಿಯುನಲ್ಲಿ ಇರುವ ಸೋಂಕಿತರ ಪೈಕಿ ಬಹುಪಾಲು ಮಂದಿಯ ದೇಹಸ್ಥಿತಿ ಗಂಭೀರವಾಗಿದೆ. 6 ವಾರ್ಡ್‌ಗಳಿಗೆ ಕೇವಲ ಮೂವರು ನರ್ಸ್‌ಗಳಿದ್ದಾರೆ’ ಎಂದು ಗೀತಾ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಸೋಂಕಿತರ ಸಾವು ಹೆಚ್ಚುತ್ತಿದೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒಗೆ ಕರೆ ಮಾಡಿದಾಗ ಸಮಸ್ಯೆ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಸಮಸ್ಯೆ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಆರೋಗ್ಯ ಸಚಿವರು ಆಸ್ಪತ್ರೆ ಅವ್ಯವಸ್ಥೆ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಅಮಾನತು ಮಾಡಿದ್ದಾರೆ. ಅಧಿಕಾರಿಯ ಅಮಾನತಿನಿಂದ ವ್ಯವಸ್ಥೆ ಸರಿ ಹೋಗುವುದಿಲ್ಲ. ಆರೋಗ್ಯ ಸಚಿವರು ಮತ್ತು ಜಿಲ್ಲಾಡಳಿತ ವ್ಯವಸ್ಥೆ ಸರಿಪಡಿಸಲು ದಯವಿಟ್ಟು ಗಮನ ಹರಿಸಬೇಕು. ಆಸ್ಪತ್ರೆಗೆ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಕೋರಿದ್ದಾರೆ.

‘ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಏನಿದು ವ್ಯವಸ್ಥೆ? ನಾವು ಸತ್ತರೂ ಪರವಾಗಿಲ್ಲ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದೆ ಸೋಂಕಿತರ ಒಳಿತಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.