ADVERTISEMENT

ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ: 12ರೊಳಗೆ ಟ್ಯಾಗಿಂಗ್ ಕಾರ್ಯ ಪೂರ್ಣಗೊಳಿಸಿ

ಜಿ.ಪಂ ಸಿಇಪ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:06 IST
Last Updated 11 ಸೆಪ್ಟೆಂಬರ್ 2025, 4:06 IST
ಕೋಲಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಯಿತು
ಕೋಲಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಯಿತು   

ಕೋಲಾರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ಕೈಗೊಳ್ಳಲು ಈಗಾಗಲೇ ಜಿಲ್ಲೆಯಲ್ಲಿ ಮೊದಲನೆ ಹಂತವಾಗಿ ಜಿಯೋ ಟ್ಯಾಗಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ಎರಡನೇ ಹಂತದಲ್ಲಿ ಸೆ.22 ರಿಂದ ಅ. 7 ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಸರ್ವೇ ಕಾರ್ಯಕ್ಕೆ ಗಣತಿದಾರರನ್ನು ನೇಮಿಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇಂಧನ ಇಲಾಖೆಯಿಂದ ಈಗಾಗಲೇ ಶೇ 80 ಮನೆಗಳಿಗೆ ಜಿಯೋ ಟ್ಯಾಗ್ ಮಾಡಿ ಸ್ಟಿಕರ್ ಅಂಟಿಸಲಾಗಿದೆ. 150 ಮನೆಗಳಿಗೆ ಒಂದು ಬ್ಲಾಕ್ ಗುರುತಿಸಿ ರೂಟ್ ಮ್ಯಾಪ್ ಹಾಗೂ ಬ್ಲಾಕ್ ಮ್ಯಾಪ್ ಮಾಡುವ ಕಾರ್ಯ ಆರಂಭಿಸಲಾಗಿದೆ. ಸೆ.12ರೊಳಗೆ ಟ್ಯಾಗಿಂಗ್ ಕಾರ್ಯ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಸಮೀಕ್ಷೆ ಕಾರ್ಯವನ್ನು 65 ಪ್ರಶ್ನಾವಳಿ ಒಳಗೊಂಡ ತಂತ್ರಾಂಶದ ಮೂಲಕ ಸರ್ವೇ ಕಾರ್ಯ ಕೈಗೊಳ್ಳಬೇಕು. ಈ ಕುರಿತು ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ಸಮರ್ಪಕವಾಗಿ ಸಮೀಕ್ಷಾ ಕಾರ್ಯ ನಡೆಸಬೇಕು ಎಂದರು.

ಜಿಲ್ಲೆಯಲ್ಲಿರುವ 4,17,305 ಕುಟುಂಬಗಳ ಮನೆಗಳ ಆರ್‌ಆರ್‌ ನಂಬರ್‌ಗಳಿಗೆ ಜಿಯೋ ಟ್ಯಾಗಿಂಗ್ ಮಾಡುವ ಮೂಲಕ ಶೇ ನೂರರಷ್ಟು ಪ್ರಗತಿ ಸಾಧಿಸಬೇಕು. ಸಮೀಕ್ಷೆ ಕಾರ್ಯಕ್ಕಿಂತ ಮುನ್ನ ಆರ್‌ಆರ್‌ ನಂಬರ್‌ಗಳನ್ನು ಗುರುತಿಸುವ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕುಟುಂಬ ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಇದರಿಂದ ಎರಡನೇ ಹಂತದಲ್ಲಿ ನಡೆಯುವ ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದರು.

ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಲಾಗಿದೆ. ಪ್ರತಿ 15 ರಿಂದ 20 ಗಣತಿದಾರರಿಗೆ ಒಬ್ಬರಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಆರ್‌ಸಿ-ಸಿಆರ್‌ಸಿಗಳು ಮೇಲ್ವಿಚಾರಕರಾಗಿ ನಿಗಾ ವಹಿಸಬೇಕು. ಪ್ರತಿ 50 ಗಣತಿದಾರರಿಗೆ ಒಬ್ಬ ಮಾಸ್ಟರ್ ಟ್ರೇನರ್ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ರಮೇಶ್, ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್ ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.