ADVERTISEMENT

ಸಮೀಕ್ಷೆ: ನೆಟ್ವರ್ಕ್ ಇಲ್ಲದ ಗ್ರಾಮಗಳಲ್ಲಿ ಶಿಬಿರ; ಜಿಲ್ಲಾಧಿಕಾರಿ ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:02 IST
Last Updated 30 ಸೆಪ್ಟೆಂಬರ್ 2025, 6:02 IST
   

ಕೋಲಾರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಮೊಬೈಲ್ ನೆಟ್ವರ್ಕ್‌ ಸಮಸ್ಯೆ ಎದುರಾದ ಗ್ರಾಮಗಳಲ್ಲಿ ಇತರೆ ಯಾವುದಾದರೂ ಸರ್ಕಾರಿ ಕಟ್ಟಡದಲ್ಲಿ ವಿಶೇಷ ಶಿಬಿರ ಏರ್ಪಡಿಸಲು ಸರ್ಕಾರ ಅನುಮತಿ ನೀಡಿದ್ದು, ಶ್ರೀನಿವಾಸಪುರ ತಾಲ್ಲೂಕಿನ 6 ನೆಟ್‌ವರ್ಕ್ ಇಲ್ಲದ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಾರೆ.

ಸಮೀಕ್ಷೆಯನ್ನು ಆನ್‌ಲೈನ್ ಆ್ಯಪ್‌ ಮೂಲಕ ನಡೆಸುತ್ತಿದ್ದು ಗಡಿ ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು, ಸಮೀಕ್ಷೆ ಕಷ್ಟವಾಗುತ್ತಿದೆ. ಈ ಹಿಂದೆ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ವೇಳೆ ಆಗಿರುವ ತೊಂದರೆ ಗಮನದಲ್ಲಿ ಇರಿಸಿಕೊಂಡು ಸಮೀಕ್ಷೆ ಸುಗಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ನೆಟ್ವರ್ಕ್ ಇಲ್ಲದ ಗ್ರಾಮಗಳಲ್ಲಿ ಕ್ಯಾಂಪ್‌ ನಡೆಸಿ ಸಮೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಸಮೀಪದಲ್ಲಿ ನೆಟ್ವರ್ಕ್ ಇರುವ ಸ್ಥಳಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಗುರುತಿಸಲಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಬೈರಗಾನಪಲ್ಲಿ ಗ್ರಾಮ ಪಂಚಾಯ್ತಿಯ ಚಿಲ್ಲಾರಪಲ್ಲಿ ಗ್ರಾಮಸ್ಥರು ಬೈರಗಾನಪಲ್ಲಿ ಗ್ರಾಮಪಂಚಾಯತ್ ಕಟ್ಟಡದಲ್ಲಿ, ಕೋಡಪಲ್ಲಿ ಗ್ರಾಮಪಂಚಾಯ್ತಿಯ ತಿಮ್ಮನಪಲ್ಲಿ ಗ್ರಾಮಸ್ಥರು ಬೈರಾಗನಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಕೂರಿಗೇಪಲ್ಲಿ ಗ್ರಾಮಪಂಚಾಯ್ತಿಯ ಮಂಗಸವಾರಿಪಲ್ಲಿಯ ಗ್ರಾಮಸ್ಥರು ಕದಿರಂಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ನೆಲವಂಕಿ ಹೋಬಳಿಯ ಪಾತನೆಲವಂಕಿ ಗ್ರಾಮಪಂಚಾಯತಿಯ ಕೊಪ್ಪವಾರಿಪಲ್ಲಿ ಗ್ರಾಮಸ್ಥರು ಕೊಪ್ಪವಾರಿಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪುಲುಗುರಿಕೋಟ ಗ್ರಾಮಪಂಚಾಯ್ತಿಯ ಕೊತ್ತಬಾಲಪಲ್ಲಿ ಗ್ರಾಮಸ್ಥರು ಕೊತ್ತಬಾಲಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪಂಡಿವಾರಿಪಲ್ಲಿ ಗ್ರಾಮಸ್ಥರು ಅದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಈ ರೀತಿಯ ಶಿಬಿರಗಳಲ್ಲಿ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.

ADVERTISEMENT

ಶಿಬಿರಗಳಲ್ಲಿ ದಿನಕ್ಕೆ 5ರಿಂದ 10 ಕುಟುಂಬಗಳಿಗೆ ಸಮಯ ನಿಗದಿ ಮಾಡಿ ಕರೆಸಿಕೊಂಡು ಸಮೀಕ್ಷೆ ನಡೆಸಲಾಗುವುದು. ಶಿಬಿರ ನಡೆಸುವ ಸ್ಥಳದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಕ್ರಮ ವಹಿಸಲಾಗಿದೆ. ಈ ಸಮೀಕ್ಷೆ ಸಂಪೂರ್ಣವಾಗಿ ಐಚ್ಛಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.