ADVERTISEMENT

ಮನೆ ಕಳವು ನಿಯಂತ್ರಣಕ್ಕೆ ಸಿದ್ಧವಾಗಿದೆ ‘ಸುಬಾಹು’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 13:53 IST
Last Updated 10 ಮಾರ್ಚ್ 2020, 13:53 IST
ಎಂ.ಎಸ್.ಮೊಹಮದ್ ಸುಜೀತ ಎಸ್ಪಿ.
ಎಂ.ಎಸ್.ಮೊಹಮದ್ ಸುಜೀತ ಎಸ್ಪಿ.   

ಕೆಜಿಎಫ್‌: ಸಾರ್ವಜನಿಕರೊಡನೆ ಉತ್ತಮ ಬಾಂಧವ್ಯ ಹೊಂದಲು ಮತ್ತು ಕಳವು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ‘ಸುಬಾಹು’ ಎಂಬ ಆ್ಯಪ್‌ ಅನ್ನು ಪೊಲೀಸ್ ಇಲಾಖೆ ಸಿದ್ಧಪಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್‌.ಮೊಹಮದ್ ಸುಜೀತ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಧಾರಣವಾಗಿ ಬೀಟ್ ಪೊಲೀಸರ ಜೊತೆ ನಾಗರಿಕರ ಸಂಪರ್ಕ ಕಡಿಮೆ ಇರುತ್ತದೆ. ಬೀಟ್‌ ಪೊಲೀಸರ ಜೊತೆಗೆ ಉತ್ತಮ ಬಾಂಧವ್ಯ ಕಲ್ಪಿಸಿಕೊಂಡರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಲಭವಾಗುತ್ತದೆ. ಆ್ಯಪ್‌ನಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲ ಒಂಭತ್ತು ಬೀಟ್ ವ್ಯವಸ್ಥೆಯ ಪರಿಚಯವಿರುತ್ತದೆ. ಒಂದು ವಾರದಲ್ಲಿ ಬೀಟ್‌ ವ್ಯವಸ್ಥೆಯ ಭೂ ನಕ್ಷೆ ತಯಾರಾಗಲಿದ್ದು, ನಂತರ ಪೊಲೀಸರೊಡನೆ ಆ್ಯಪ್‌ ಮೂಲಕ ನೇರ ಸಂಪರ್ಕ ಹೊಂದಬಹುದು ಎಂದು ತಿಳಿಸಿದರು.

ಒಂಟಿ ಮನೆಗಳು, ಹಿರಿಯ ನಾಗರಿಕರು, ಮನೆಗೆ ಬೀಗ ಹಾಕಿಕೊಂಡು ಹೋಗುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅನಿರೀಕ್ಷಿತವಾಗಿ ಬೀಗ ಹಾಕಿಕೊಂಡು ಹೋಗುವವರು ತಮ್ಮ ಪ್ರಯಾಣದ ವಿವರವನ್ನು ಪೊಲೀಸರಿಗೆ ತಿಳಿಸಿದರೆ, ಆ ಮನೆಯಲ್ಲಿ ಮೋಷನ್‌ ಕ್ಯಾಮೆರ ಅಳವಡಿಸಲಾಗುವುದು.

ADVERTISEMENT

ಮನೆಯೊಳಗೆ ಯಾರೇ ಪ್ರವೇಶಿಸಿದರೂ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ಮನೆಯ ಮಾಲೀಕರ ಮೊಬೈಲ್‌ಗೆ ಮಾಹಿತಿ ಹೋಗುತ್ತದೆ. ಈ ಯೋಜನೆಯನ್ನು ಒಂದು ತಿಂಗಳ ಕಾಲ ಪೈಲೆಟ್‌ ಯೋಜನೆಯಾಗಿ ಅಳವಡಿಸಲಾಗುವುದು ಎಂದು ಎಸ್ಪಿ ಹೇಳಿದರು.

ಮುಂದಿನ ದಿನಗಳಲ್ಲಿ ಸುಬಾಹು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಹೊಂದಲಿದೆ. ಮುಖ ಗುರುತಿಸಲಿರುವ ಕ್ಯಾಮೆರಾಗಳನ್ನು ಅಲ್ಲಲ್ಲಿ ಅಳವಡಿಸಲಾಗುವುದು. ಈ ಮೂಲಕ ಕಳ್ಳಕಾಕರ ಚಲನವಲಗಳ ಬಗ್ಗೆ ನಿಗಾ ವಹಿಸಬಹುದು. ಪ್ರತಿಯೊಂದು ಠಾಣೆಯಲ್ಲಿ ಐದು ಕ್ಯಾಮೆರಾಗಳು ಸಿದ್ಧ ಇವೆ. ಇನ್ನೂ ಹೆಚ್ಚಿನ ಕ್ಯಾಮೆರಾಗಳು ಬರಲಿವೆ.

ಸಾರ್ವಜನಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಪೊಲೀಸ್ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಆ್ಯಪ್‌ ಬಗ್ಗೆ ಪ್ರತಿ ಪೊಲೀಸ್ ಠಾಣೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಜನಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದು ಸುಜೀತ ತಿಳಿಸಿದರು.

ಡಿವೈಎಸ್ಪಿ ಉಮೇಶ್ ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.