ADVERTISEMENT

ಶ್ರೀನಿವಾಸಪುರ | ಕರಾಟೆಯಲ್ಲಿ ಮಿಂಚಿದ ಗಾನಶ್ರೀ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 9:01 IST
Last Updated 8 ಜುಲೈ 2023, 9:01 IST
   

ಆರ್.ಚೌಡರೆಡ್ಡಿ

ಶ್ರೀನಿವಾಸಪುರ: ಪಟ್ಟಣದ ಯುವತಿಯೊಬ್ಬರು ಕರಾಟೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವುದರ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಕರಾಟೆ ಸ್ಪರ್ಧೇಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಹೆಸರು ಮಾಡಿರುವ ಎಚ್.ಎನ್.ಗಾನಶ್ರೀ ಪಟ್ಟಣದ ಕರಾಟೆ ತರಬೇತುದಾರ ಎಚ್.ಎನ್.ನರಸಿಂಹಯ್ಯ ಮತ್ತು ಎಸ್.ಎನ್.ಶೋಭಾರಾಣಿ ಅವರ ಪುತ್ರಿ. ಸಧ್ಯ ಮುಳಬಾಗಿಲಿನ ಸೋಮೇಶ್ವರ ಪಾಳ್ಯದಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ತಂದೆ ಎಚ್.ಎನ್.ನರಸಿಂಹಯ್ಯ ಒಕಿನೋವ ಗೊಜುರೈ ಕರಾಟೆ ಡೋ ಎಂಬ ಹೆಸರಿನ ಕರಾಟೆ ಶಾಲೆ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. ಚಿಕ್ಕಂದಿನಲ್ಲಿ ತಂದೆಯೊಂದಿಗೆ ಕರಾಟೆ ಅಭ್ಯಾಸ ನೋಡಲು ಹೋಗುತ್ತಿದ್ದ ಗಾನಶ್ರೀಗೆ ಸಹಜವಾಗಿಯೇ ಕರಾಟೆ ಕಲಿಯುವ ಆಸಕ್ತಿ ಉಂಟಾಯಿತು. ಇತರ ಮಕ್ಕಳೊಂದಿಗೆ ಕರಾಟೆ ತರಬೇತಿ ಪಡೆದರು. ಕಲಿಕೆಯ ಎಲ್ಲ ಹಂತಗಳನ್ನೂ ಯಶಸ್ವಿಯಾಗಿ ಪೂರೈಸಿದರು.

ಬೆಂಗಳೂರು, ಹಾಸನ, ಧಾರವಾಡ, ಕಟೀಲು ಮತ್ತಿತರ ಕಡೆ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯದ ಗಮನ ಸೆಳೆದರು. ಆಂಧ್ರಪ್ರದೇಶದ ಮದನಪಲ್ಲಿ, ಚಿತ್ತೂರು, ಹೈದರಾಬಾದ್, ತಮಿಳುನಾಡಿನ ಚೆನ್ನೈ ಮತ್ತಿತರ ಕಡೆಗಳಲ್ಲಿ ನಡೆದ ಅಂತರರಾಜ್ಯ ಮಟ್ಟದ ವಿವಿಧ ವಯೋಮಾನದ ಕರಾಟೆ ಪಟುಗಳ, ಕರಾಟೆ ಸ್ಪರ್ಧೆಗಳಲ್ಲಿ ಸೆಣಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಗಾನಶ್ರೀ ಬಿಎಸ್ಸಿ ಪದವಿ ಮುಗಿಸಿದ ಬಳಿಕ ಬ್ರಾಂಚ್ ಪೋಸ್ಟ್ ಮಾಸ್ಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಳಬಾಗಿಲಿಗೆ ವರ್ಗವಾಗುವ ಮುನ್ನ, ಗೌರಿಬಿದನೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಎಲ್ಲೇ ಇದ್ದರೂ, ಬಿಡುವಿನ ವೇಳೆಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುತ್ತಾರೆ.

‘ಕರಾಟೆ ರಕ್ಷಣಾ ಕೌಶಲ. ಬದಲಾದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಕಲಿಯಲೇ ಬೇಕಾದ ಕಲೆ. ಅದರಲ್ಲೂ ಹೆಣ್ಣು ಮಕ್ಕಳು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಒಳ್ಳೆಯದು. ಆದ್ದರಿಂದಲೇ ನಾನು ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದೇನೆ’ ಎಂದು ಗಾನಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೋಷಕರು ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಕೊಡಿಸಬೇಕು. ಅದರಲ್ಲೂ ಗ್ರಾಮೀಣ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಕರಾಟೆ ಶಾಲೆಗೆ ಕಳಿಸಬೇಕು. ಸಾಧ್ಯವಾಗದಿದ್ದರೆ ಶಾಲೆಗಳಲ್ಲಿ ಏರ್ಪಡಿಸುವ ಕರಾಟೆ ತರಬೇತಿ ತರಗತಿಗೆ ತಪ್ಪದೆ ಕಳಿಸಬೇಕು. ಕರಾಟೆ ಗೊತ್ತಿದ್ದರೆ ಅನಿವಾರ್ಯ ಪರಿಸ್ಥಿತಿ ಎದುರಾದಾಗ, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.