
ಶ್ರೀನಿವಾಸಪುರ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ನಸುಕಿನಿಂದಲೇ ಬೀದಿನಾಯಿಗಳ ಹಾವಳಿ ಶುರುವಾಗುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಬೆಳಗಿನ ವಿಶೇಷ ತರಗತಿಗಳ ಹಿನ್ನೆಲೆಯಲ್ಲಿ ಮುಂಜಾನೆ ಶಾಲೆ ಹಾಗೂ ಟ್ಯೂಷನ್ ಕೇಂದ್ರಗಳಿಗೆ ತೆರಳಬೇಕಾಗುತ್ತದೆ. ಈ ವೇಳೆ ರಸ್ತೆ ಮಧ್ಯೆ ಗುಂಪುಗೂಡಿ ನಿಂತಿರುವ ನಾಯಿಗಳಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಸಾಗುತ್ತಿದ್ದಾರೆ. ಕೆಲವೆಡೆ ನಾಯಿಗಳು ಮಕ್ಕಳನ್ನು ಹಿಂಬಾಲಿಸಿ ದಾಳಿ ನಡೆಸಿರುವ ಘಟನೆಗಳೂ ನಡೆದಿವೆ ಎಂದು ಪೋಷಕರು ತಿಳಿಸಿದ್ದಾರೆ.
ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಬೆಳಿಗ್ಗೆ ತೆರಳುವ ಕಾರ್ಮಿಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣದ ರಾಜಾಜಿ ರಸ್ತೆ, ಆಜಾದ್ ರಸ್ತೆ, ಜಾಕಿರ್ ಹುಸೇನ್ ಮೊಹಲ್ಲಾ, ಹೈದರಾಲಿ ಮೊಹಲ್ಲಾ ಹಾಗೂ ಪವನ್ ಆಸ್ಪತ್ರೆ ಸರ್ಕಲ್ ಭಾಗಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಬೆಳಗಿನ ವ್ಯಾಯಾಮಕ್ಕೆ ತೆರಳುವ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಬೈಕ್ ಸವಾರರಿಗೆ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ. ಕೆಲ ನಾಯಿಗಳು ಬೈಕ್ ಹಿಂಬಾಲಿಸಿದರೆ, ಕೆಲ ನಾಯಿಗಳು ಏಕಾಏಕಿ ಅಡ್ಡಬಂದು ಅಪಘಾತಕ್ಕೆ ಕಾರಣವಾಗುತ್ತಿವೆ. ಕೆಲವರು ಸಣ್ಣಪುಟ್ಟ ಅಪಘಾತಕ್ಕೆ ಒಳಗಾಗಿದ್ದಾರೆ.
ಆಜಾದ್ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಹಾಗೂ ಚಾರ್ಮಿನಾರ್ ಮಸೀದಿ ಕಡೆ ಬೆಳಗಿನ ಪ್ರಾರ್ಥನೆಗೆ ತೆರಳುವ ಭಕ್ತರು ಸಹ ನಾಯಿಗಳ ಗುಂಪುಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸಿದ ನಂತರವೇ ಕ್ರಮ ಕೈಗೊಳ್ಳಬೇಕೇ? ಅಥವಾ ಮುನ್ನೆಚ್ಚರಿಕೆಯಾಗಿ ಸಮಸ್ಯೆ ಪರಿಹರಿಸಬೇಕೇ ಎಂದು ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಶೆಲ್ಟರ್‌ನಲ್ಲಿ ಇಡಬೇಕು. ಜೊತೆಗೆ ಲಸಿಕಾ ಕಾರ್ಯಕ್ರಮ ಜಾರಿಗೊಳಿಸಬೇಕು. ಆದರೆ ಈ ಕುರಿತು ಸಮರ್ಪಕ ಹಾಗೂ ನಿಯಮಿತ ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾದರೆ ಬೀದಿನಾಯಿಗಳ ಗುಂಪುಗೂಡುವಿಕೆ ಕಡಿಮೆಯಾಗಬಹುದು. ಆಹಾರದ ಅವಶೇಷಗಳನ್ನು ರಸ್ತೆ ಬದಿಯಲ್ಲಿ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.