ADVERTISEMENT

ಸ್ಕೌಟ್ಸ್, ಗೈಡ್ಸ್ ಶಾಖೆ ಆರಂಭಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜ ಗೌಡ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 11:55 IST
Last Updated 8 ಸೆಪ್ಟೆಂಬರ್ 2019, 11:55 IST
ಕೋಲಾರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಭಾನುವಾರ ತಾಲ್ಲೂಕಿನ ಶಿಕ್ಷಕರಿಗೆ ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜ್‌ ಗೌಡ ಮಾತನಾಡಿದರು.
ಕೋಲಾರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಭಾನುವಾರ ತಾಲ್ಲೂಕಿನ ಶಿಕ್ಷಕರಿಗೆ ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜ್‌ ಗೌಡ ಮಾತನಾಡಿದರು.   

ಕೋಲಾರ: ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬಗ್ಗೆ ಅರಿವು ಪಡೆದುಕೊಂಡು ಪ್ರತಿ ಶಾಲೆಯಲ್ಲೂ ಸಂಸ್ಥೆ ಶಾಖೆಯನ್ನು ಸ್ಥಾಪನೆ ಮಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜ ಗೌಡ ಸೂಚನೆ ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಇಲ್ಲಿ ಭಾನುವಾರ ತಾಲ್ಲೂಕಿನ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಈಗಾಗಲೇ ಸಂಸ್ಥೆಯಿಂದ ಕೆಲ ಶಿಕ್ಷಕರು ತರಬೇತಿ ಪಡೆದುಕೊಂಡು ಯಾವುದೇ ಪ್ರಯೋಜನೆಯಾಗಲಿಲ್ಲ, ವಿದ್ಯಾರ್ಥಿಗಳನ್ನು ಸಂಸ್ಥೆಯ ಸದಸ್ಯರನ್ನಾಗಿಸಿ’ ಎಂದು ಸಲಹೆ ನೀಡಿದರು.

‘ಶಿಕ್ಷಕರು ಪಡೆದುಕೊಂಡ ತರಬೇತಿ ಪ್ರಯೋಜನೆಯಾಗಬೇಕು. ಕಾಲಹರಣಕ್ಕೆ ತರಬೇತಿ ಬರಬಾರದು. ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಅರಿವು ಪಡೆದುಕೊಂಡವರು ಖಚಿತವಾಗಿಯೂ ಸಮಾಜಕ್ಕೆ ಉಪಯೋಗವಾಗುವ ರೀತಿ ಮಕ್ಕಳಿಗೆ ತರಬೇತಿ ನೀಡಿ’ ಎಂದು ಸಲಹೆ ನೀಡಿದರು.

ADVERTISEMENT

‘ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪಾತ್ರ ಮಹತ್ವವಾದುದ್ದು, ಸಮಾಜದಲ್ಲಿ ಅಸೂಯೆ. ದ್ವೇಷದಂತಹ ಸಮಸ್ಯೆಗಳು ಕಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ದೇಶಾಭಿಮಾನ, ಮಾನವೀಯ ಮೌಲ್ಯಗಳು, ಸೇವಾ ಮನೋಭಾವನೆಯನ್ನು ಬೆಳೆಸುವಂತಹ ಸಂಸ್ಥೆಯ ಚಟುವಟಿಕೆಗಳು ಶಾಲೆಗಳಲ್ಲಿ ಪ್ರಾರಂಭಿಸಬೇಕು’ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಪ್ರಗತಿಯ ಜತೆಗೆ ಜೀವನ ಕೌಶಲ ತರಬೇತಿ ನೀಡುವಲ್ಲಿ ಸಂಸ್ಥೆ ಮುಖ್ಯ ಪಾತ್ರವಹಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳ ಶಿಕ್ಷಣದ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಳ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ದಳಗಳನ್ನು ತೆರೆದು ರಾಜ್ಯದಲ್ಲಿಯೇ ಮಾದರಿ ತಾಲ್ಲೂಕನ್ನಾಗಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

‘ಪರಿಸರ ಸಂರಕ್ಷಣೆ, ಸ್ವಚ್ಚಭಾರತ್, ಜಲಶಕ್ತಿ ಮುಂತಾದ ಯೋಜನೆಗಳ ಅನುಷ್ಟಾನಗೊಳಿಸಲು ಸಂಸ್ಥೆಯ ಸದಸ್ಯರು ಕೈಜೋಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್. ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಜಿಲ್ಲಾ ಸಂಘಟಕ ವಿಶ್ವನಾಥ್, ಸ್ಥಳೀಯ ಸಂಸ್ಥೆ ಖಚಾಂಚಿ ಮುನಿಸ್ವಾಮಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.