ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಕಲ ಸಿದ್ಧತೆ

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:41 IST
Last Updated 18 ಜನವರಿ 2019, 13:41 IST
ಶ್ರೀನಿವಾಸಾಚಾರಿ
ಶ್ರೀನಿವಾಸಾಚಾರಿ   

ಕೋಲಾರ: ‘ನಗರಸಭೆ ಮತ್ತು ಪುರಸಭೆಗಳನ್ನು ಒಳಗೊಂಡಂತೆ ರಾಜ್ಯದ 101 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ತಡ ಮಾಡಲು ಸಾಧ್ಯವಿಲ್ಲ’ ಎಂದರು.

‘ಈಗಾಗಲೇ ಮೊದಲ ಹಂತದಲ್ಲಿ 108 ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ ಮತ್ತು ಸೆಪ್ಟೆಬಂರ್‌ನಲ್ಲಿ ಚುನಾವಣೆ ನಡೆದಿದೆ. ಉಳಿದ 101 ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮಾರ್ಚ್‌ ಅಥವಾ ಏಪ್ರಿಲ್‌ಗೆ ಅಂತ್ಯಗೊಳ್ಳಲಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದಲ್ಲಿ ಫೆಬ್ರುವರಿಯೊಳಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಚುನಾವಣೆಗೆ ಅಗತ್ಯವಿರುವ ಮತದಾರರ ಪಟ್ಟಿ ಸಿದ್ಧವಾಗಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ಮೊದಲ ಹಂತದಲ್ಲಿ ಪರಿಶೀಲಿಸಲಾಗಿದೆ. ಬೂತ್‌ ಮಟ್ಟದ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜತೆಗೆ ಮತ ಕೇಂದ್ರಗಳನ್ನು ಗುರುತಿಸಲಾಗಿದೆ. ಮತ ಎಣಿಕೆ ಹಾಗೂ ಮತಪೆಟ್ಟಿಗೆ ಸಂಗ್ರಹಣಾ ಕೇಂದ್ರಗಳನ್ನು ಸಹ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪುನರ್ ಮೀಸಲಾತಿ: ‘ಈ ಹಿಂದೆ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಸಂಬಂಧ ಬೆಂಗಳೂರು, ಗುಲ್ಬರ್ಗ ಹಾಗೂ ಧಾರವಾಡ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ ಬೆಂಗಳೂರು ನ್ಯಾಯಾಲಯವು 13 ಪ್ರಕರಣಗಳಲ್ಲಿ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿಯನ್ನು ತಳ್ಳಿ ಹಾಕಿ ಜ.28ರೊಳಗೆ ಪುನರ್ ಮೀಸಲಾತಿ ಪ್ರಕಟಿಸಿ ಆಯೋಗಕ್ಕೆ ವರದಿ ನೀಡುವಂತೆ ಸೂಚನೆ ನೀಡಿದೆ’ ಎಂದು ಹೇಳಿದರು.

‘ಸರ್ಕಾರ ಜ.27ರೊಳಗೆ ಮೀಸಲಾತಿ ಪಟ್ಟಿ ನೀಡುವ ವಿಶ್ವಾಸವಿದೆ. ಜ.28ಕ್ಕೆ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣಾ ದಿನಾಂಕ ಘೋಷಿಸಲಾಗುವುದು. ಫೆಬ್ರುವರಿ ತಿಂಗಳಲ್ಲಿ ಚುನಾವಣೆ ನಡೆಸದಿದ್ದರೆ ಮಾರ್ಚ್‌ನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ತೊಂದರೆಯಾಗುತ್ತದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.