ADVERTISEMENT

ಆತ್ಮವಿಶ್ವಾಸದಿಂದ ಬದುಕಿ ಸಮಸ್ಯೆ ಜಯಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:31 IST
Last Updated 13 ಸೆಪ್ಟೆಂಬರ್ 2021, 13:31 IST
ಕೋಲಾರದಲ್ಲಿ ಸೋಮವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ತಡೆ ಪ್ರತಿಜ್ಞಾವಿಧಿ ಸ್ವೀಕರಿಸಿದರು
ಕೋಲಾರದಲ್ಲಿ ಸೋಮವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ತಡೆ ಪ್ರತಿಜ್ಞಾವಿಧಿ ಸ್ವೀಕರಿಸಿದರು   

ಕೋಲಾರ: ‘ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮವಿಶ್ವಾಸದಿಂದ ಬದುಕಿ ಸಮಸ್ಯೆ ಜಯಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಮಾತನಾಡಿ, ‘ಮನುಷ್ಯ ಆತ್ಮಸಾಕ್ಷಿ, ಆತ್ಮವಂಚನೆ ಮತ್ತು ಆತ್ಮಾವಲೋಕನದ ಹಂತ ದಾಟಿದಾಗ ಸ್ವಯಂಪ್ರೇರಿತವಾಗಿ ಸಾವು ತಂದುಕೊಳ್ಳುತ್ತಾನೆ ಈ ಹಂತಗಳನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

‘ಮಾನಸಿಕವಾಗಿ ದುರ್ಬಲರಾದವರು ಬಲವಂತವಾಗಿ ಸಾವು ತಂದುಕೊಳ್ಳುತ್ತಾರೆ. ಜನರು ಸಾವು ನಿಗ್ರಹಿಸುವ ಶಕ್ತಿ ಪಡೆಯಬೇಕು. ಯಾವುದೇ ಸಮಸ್ಯೆ ಬಗೆಹರಿಸುವ ಆತ್ಮಸ್ಥೈರ್ಯ ಬರಬೇಕು. ಆತ್ಮಹತ್ಯೆಗೆ ವಯಸ್ಸಿನ ಅಂತರವಿಲ್ಲ. ಆತ್ಮಹತ್ಯೆಯು ಅಪರಾಧವಾಗಿದ್ದು, ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ ಆತ್ಮಹತ್ಯೆ ತಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಮಾನಸಿಕ ಅನಾರೋಗ್ಯದ ಕಾರಣ ಆತ್ಮಹತ್ಯೆಗಳು ಹೆಚ್ಚುತ್ತಿರುವುದು ದುರಂತ. ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಅಮೂಲ್ಯ ಜೀವ ಹಾಳು ಮಾಡಿಕೊಳ್ಳುತ್ತಾರೆ. ಮನುಷ್ಯನಿಗೂ ಸಮಸ್ಯೆಗಳು ಸಾಮಾನ್ಯ. ಸಮಸ್ಯೆ ಎದುರಿಸುವ ಶಕ್ತಿ ಸಹ ಇರುತ್ತದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಸಲಹೆ, ಚಿಕಿತ್ಸೆ ಹಾಗೂ ಅರಿವು ಮೂಡಿಸುವ ಮೂಲಕ ಆತ್ಮಹತ್ಯೆ ತಡೆಗಟ್ಟಬಹುದು’ ಎಂದರು.

‘ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಗೆ ಹೋಲಿಸಿದರೆ ಮಾನಸಿಕ ಸಮಸ್ಯೆಯಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಪೋಷಕರು ಮಕ್ಕಳ ಮೇಲೆ ಬಲವಂತವಾಗಿ ಮಾನಸಿಕ ಒತ್ತಡ ಹೇರಬಾರದು. ಮಕ್ಕಳ ಮೇಲೆ ಒತ್ತಡ ಹೆಚ್ಚಿದರೆ ಖಿನ್ನರಾಗುತ್ತಾರೆ. ಆದ ಕಾರಣ ಮಕ್ಕಳು ಒತ್ತಡಕ್ಕೆ ಒಳಗಾದಂತೆ ಪೋಷಕರು ನಿಗಾ ವಹಿಸಬೇಕು. ಮಕ್ಕಳಿಗೆ ಆಸಕ್ತಿಯಿರುವ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಲು ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

‘ಆತ್ಮಹತ್ಯೆಯೂ ಮನಸ್ಸಿಗೆ ಸಂಬಂಧಿಸಿದ ವಿಷಯವಾಗಿದ್ದು, ಮನಸ್ಸನ್ನು ಮಾನಸಿಕವಾಗಿ ದುರ್ಬಲವಾಗದಂತೆ ನೋಡಿಕೊಳ್ಳಬೇಕು. ಅಮೂಲ್ಯವಾದ ಬದುಕನ್ನು ಆತ್ಮಹತ್ಯೆಗೆ ದೂಡಬೇಡಿ ಎಂಬ ಸಂದೇಶ ಪ್ರತಿಯೊಬ್ಬರಿಗೂ ತಲುಪಬೇಕು. ಜನಪ್ರತಿನಿಧಿಗಳ ಜತೆ ನಡೆಯುವ ಗ್ರಾಮಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಸಭೆಗಳಲ್ಲಿ ಪ್ರಚಾರ ಮತ್ತು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಯುವಕರು ಹೆಚ್ಚು: ‘ಜಾಗತಿಕವಾಗಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎಂಬುದು ಸೇರಿದಂತೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎನ್‌.ಸಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘19 ವರ್ಷದಿಂದ 25 ವರ್ಷ ವಯೋಮಾನದವರ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ. ಜಾಗತಿಕವಾಗಿ ಪ್ರತಿ ವರ್ಷ ಆತ್ಮಹತ್ಯೆಯಿಂದ ಸುಮಾರು 10 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಶೈಕ್ಷಣಿಕ ಹಿನ್ನಡೆ, ಪ್ರೇಮ ವೈಫಲ್ಯ, ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಏಕಾಂತದಲ್ಲಿ ಇರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹವರನ್ನು ನಿರ್ಲಕ್ಷಿಸದೆ ಮನವೊಲಿಸುವ ಕೆಲಸ ಮಾಡಬೇಕು’ ಎಂದರು.

ಕ್ರಿಯಾಶೀಲವಾಗಿರಿ: ‘ಕೆಲಸದ ಒತ್ತಡ ಮತ್ತು ಜೀವನ ಶೈಲಿಯಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯ ಪ್ರತಿ ಕ್ಷಣ ಕ್ರಿಯಾಶೀಲವಾಗಿರಬೇಕು. ಆತ್ಮಹತ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶಕ್ಕೆ ವಿಶ್ವಸಂಸ್ಥೆ ಆತ್ಮಹತ್ಯೆ ತಡೆ ದಿನ ಆಚರಣೆಗೆ ತಂದಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಗದೀಶ್ ವಿವರಿಸಿದರು.

ಮನೋವೈದ್ಯೆ ಡಾ.ವಿಜೇತದಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಪವನ್ ವಿದ್ಯಾಸಂಸ್ಥೆ ಉಪ ಪ್ರಾಂಶುಪಾಲೆ ಸುಮಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.