ADVERTISEMENT

ಕೋಲಾರ | ಅನಿಲ್‌, ಕೊತ್ತೂರು– ಸೀತಿಹೊಸೂರು ಮುರಳಿ ಜಟಾಪಟಿ!

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:14 IST
Last Updated 1 ಸೆಪ್ಟೆಂಬರ್ 2025, 7:14 IST
ಕೋಲಾರ ತಾಲ್ಲೂಕಿನ ಬೈರಾಂಡಹಳ್ಳಿಯಲ್ಲಿ ಭಾನುವಾರ ಕಾಮಗಾರಿಗೆ ಭೂಮಿಪೂಜೆ ವೇಳೆ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಕೆ.ಎಚ್‌.ಮುನಿಯಪ್ಪ ಬೆಂಬಲಿಗ ಸೀತಿಹೊಸೂರು ಮುರಳಿಗೌಡ ನಡುವೆ ಜಟಾಪಟಿ ನಡೆಯಿತು
ಕೋಲಾರ ತಾಲ್ಲೂಕಿನ ಬೈರಾಂಡಹಳ್ಳಿಯಲ್ಲಿ ಭಾನುವಾರ ಕಾಮಗಾರಿಗೆ ಭೂಮಿಪೂಜೆ ವೇಳೆ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಕೆ.ಎಚ್‌.ಮುನಿಯಪ್ಪ ಬೆಂಬಲಿಗ ಸೀತಿಹೊಸೂರು ಮುರಳಿಗೌಡ ನಡುವೆ ಜಟಾಪಟಿ ನಡೆಯಿತು    

ಕೋಲಾರ: ತಾಲ್ಲೂಕಿನ ವೇಮಗಲ್‌ ಹೋಬಳಿ ಬೈರಾಂಡಹಳ್ಳಿ ಗ್ರಾಮದ ಕೆರೆ ಬಳಿ ಭಾನುವಾರ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ವೇಳೆ ಕೆ.ಎಚ್‌.ಮುನಿಯಪ್ಪ ಬೆಂಬಲಿಗ ಸೀತಿಹೊಸೂರು ಮುರಳಿಗೌಡ ಹಾಗೂ ಶಾಸಕ ಕೊತ್ತೂರು ಮಂಜುನಾಥ್‌ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು.

ಕೆರೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಮಂಜೂರಾಗಿದೆಯೇ, ಯಾರು ಎಂಜಿನಿಯರ್ ಎಂದು ಕಾಂಗ್ರೆಸ್‌ ಮುಖಂಡ ಸೀತಿಹೊಸೂರು ಮುರಳಿ, ಅಧಿಕಾರಿಯನ್ನು ಪ್ರಶ್ನೆ ಮಾಡಿದರು. ಆಗ ಆ ಅಧಿಕಾರಿ, ‘ಕೆರೆ ಅಭಿವೃದ್ಧಿಗೆ ಆಗಿದೆ, ರಸ್ತೆ ಅಭಿವೃದ್ಧಿಗೆ ಗೊತ್ತಿಲ್ಲ’ ಎಂದರು. ಕೊತ್ತೂರು ಮಂಜುನಾಥ್‌ ಮಧ್ಯ ಪ್ರವೇಶಿಸಿ, ‘ಆ ವಿಚಾರ ಎಂಜಿನಿಯರ್‌ಗೆ ಗೊತ್ತಿಲ್ಲ. ಖಂಡಿತ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಂತಚಿತ್ತದಿಂದಲೇ ಉತ್ತರಿಸಿದರು.

ಅನುದಾನ ಬಿಡುಗಡೆ ಆಗದೆ ಕಾಮಗಾರಿ ನಡೆಸಲು ಪೂಜೆ ಮಾಡುತ್ತೀರಾ, ಅನುದಾನ ಬಿಡುಗಡೆ ಆಗಿದೆಯೇ, ಅಂದಾಜುಪಟ್ಟಿ ತಯಾರಿಸಿದ್ದೀರಾ, ವರ್ಕ್‌ ಆರ್ಡರಾ ಆಗಿದಿಯಾ ಎಂದೆಲ್ಲಾ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ ಕೂಡ ಆಗಿರುವ ಸೀತಿಹೊಸೂರು ಮುರಳಿಗೌಡ ಕೇಳುತ್ತಾ ಹೋದರು.

ADVERTISEMENT

ಆಗ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಪ್ರವೇಶವಾಯಿತು. ‘ಏಕ‌ಪ್ಪ, ಏನು ಸಮಾಚಾರ’ ಎಂದು ಕೋಪದಿಂದ ಕೈ ತೋರಿಸಿ ಪ್ರಶ್ನಿಸಿದರು. ಆಗ ಕೋಮುಲ್‌ ನಿರ್ದೇಶಕ ಚಂಜಿಮಲೆ ರಮೇಶ್‌, ಶಾಸಕ ಸೇರಿದಂತೆ ಉಳಿದವರೂ ಧ್ವನಿಗೂಡಿಸಿ ಮುರಳಿಗೌಡ ಅವರತ್ತ ಮುಗಿಬಿದ್ದರು.

‘ಏನು ಮಾತನಾಡುತ್ತಿದ್ದೀಯಾ, ಹೆಚ್ಚು ಮಾತನಾಡಿದರೆ ಸುಮ್ಮನಿರಲ್ಲ. ಏನು ದಬ್ಬಾಳಿಕೆ ಮಾಡುತ್ತಿದ್ದೀಯಾ’ ಎಂದು ಅನಿಲ್‌ ಏಕವಚನದಲ್ಲಿ ಪ್ರಶ್ನಿಸಿದರು. ಆಗ ಜಟಾಪಟಿ ಆರಂಭವಾಗಿ ಉಭಯ ಬೆಂಬಲಿಗರ ಕೂಗಾಟ ನಡೆಯಿತು. ನೂಕುನುಗ್ಗಲು ನಡೆದು ಕೆಲವರು ಕೈ ಮಾಡಲು ಹೋದರು. ಅಲ್ಲಿದ್ದ ಕೆಲವರು ಮುರಳಿ ಅವರನ್ನು ಬೇರೆಡೆಗೆ ಎಳೆದೊಯ್ದರು. ವೇಮಗಲ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಂಜು ಮಧ್ಯ ಪ್ರವೇಶಿಸಿದರು.

ಅನಿಲ್‌ ಕುಮಾರ್‌ ಮಾತು ಮುಂದುವರಿಸಿ, ‘ಅಧಿಕಾರಿ ಇಲ್ಲಿಗೆ ಬಂದಿದ್ದು ಅವರಿಗೆ ಧಮ್ಕಿ ಹಾಕುವಂತೆ ಮಾತನಾಡುತ್ತೀರಾ? ಕೆರೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಟೆಂಡರ್‌ ಆಗಿದೆ. ₹3.25 ಕೋಟಿ ಮೊತ್ತದ ಕಾಮಗಾರಿಯನ್ನು 9 ತಿಂಗಳಲ್ಲಿ ಮುಗಿಸಬೇಕು. ಅನುದಾನ ಬಿಡುಗಡೆಯಾಗದೆ ಕಾಮಗಾರಿಗೆ ಪೂಜೆ ಮಾಡುತ್ತಿದ್ದಾರೆ ಎಂಬುದು ಅವರ ಆರೋಪ’ ಎಂದರು.

‘ಕೆಲಸಕ್ಕೆ ಬಾರದವರು ಪ್ರಶ್ನೆ ಮಾಡುತ್ತಾರೆ. ಪ್ರಶ್ನೆ ಮಾಡಲು ರೀತಿರಿವಾಜು ಇದೆ. ರಸ್ತೆ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡಲಾಗುತ್ತಿದೆ. ಅನುದಾನ ಬಿಡುಗಡೆಯಾಗಿ ವರ್ಕ್‌ ಆರ್ಡರ್‌, ಟೆಂಡರ್‌ ಆಗಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಅಧಿಕಾರಿ ನಿಮ್ಮ ಮನೆ ಕೆಲಸದವರಾ?

‘ಏಕೆ ಅಧಿಕಾರಿಯನ್ನು ಹೇ ಎಂದು ಮಾತನಾಡಿಸುತ್ತೀಯಾ? ಆ ಎಂಜಿನಿಯರ್‌ ನಿಮ್ಮ ಮನೆ ಕೆಲಸದವರಾ?’ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಕಾಂಗ್ರೆಸ್‌ ಮುಖಂಡ ಸೀತಿಹೊಸೂರು ಮುರಳಿಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಮೈಲಾಂಡಹಳ್ಳಿ ಮುರಳಿ ಮಧ್ಯ ಪ್ರವೇಶಿಸಿ ‘ಹೇ ಸೀತಿಹೊಸೂರು ಮುರಳಿ ನಿನಗೆ ಕಾಮನ್‌ಸೆನ್ಸ್‌ ಇಲ್ಲವಾ?’ ಎಂದು ತರಾಟೆಗೆ ತೆಗೆದುಕೊಂಡರು.

ಮುನಿಯಪ್ಪ ಬಣದ ಸೀತಿಹೊಸೂರು ಮುರಳಿಗೌಡ ಅವರನ್ನು ಸ್ಥಳದಿಂದ ಹೊರಗೆ ಕಳಿಸಿದ ಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.