ADVERTISEMENT

ಉಗ್ರರಿಗೆ ಬುದ್ಧಿ ಕಲಿಸಲು ಯುದ್ಧ ಅನಿವಾರ್ಯ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಮನೆ ಬಾಗಿಲಿಗೆ ಭಯೋತ್ಪಾದಕರು ಬಂದಾಗಲೂ ಶಾಂತಿ ಮಂತ್ರ ಬೋಧಿಸುತ್ತೀರಾ? ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 13:10 IST
Last Updated 2 ಮೇ 2025, 13:10 IST
<div class="paragraphs"><p>ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ</p></div>

ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

   

ಕೋಲಾರ: ‘ತಮ್ಮ ಮನೆ ಬಾಗಿಲಿಗೆ ಭಯೋತ್ಪಾದಕರು ಬಂದಾಗಲೂ ಶಾಂತಿ ಮಂತ್ರ ಬೋಧಿಸುತ್ತೀರಾ? ನೀವು ಬೋಧಿಸುವುದಾದರೆ ನಾನೂ ಬೋಧಿಸುತ್ತೇನೆ. ಗನ್ ಕಿತ್ತುಕೊಂಡು ಅವರನ್ನು ಹತ ಮಾಡುವುದಾದರೆ ನಾನು ಕೂಡ ಅದನ್ನೇ ಮಾಡುತ್ತೇನೆ. ಗಡಿಯಲ್ಲಿರುವ ಭಯೋತ್ಪಾದನೆ ನಾಡಿನ ಮಧ್ಯಕ್ಕೆ ಬರಬಾರದೆಂದರೆ ಚಡಿ ಏಟು ಬೀಸಲು ಸಿದ್ಧರಿರಬೇಕಾಗುತ್ತದೆ’ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮನೆಗೆ, ನಮ್ಮ ಬುಡಕ್ಕೆ ಬಂದಾಗಲೇ ಸಮಸ್ಯೆಯ ಅರಿವು ಆಗುತ್ತದೆ ಎಂದರು.

ADVERTISEMENT

ಪಾಕಿಸ್ತಾನ ವಿರುದ್ಧ ಯುದ್ಧದ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಭಯೋತ್ಪಾದಕರಿಗೆ ಬುದ್ಧಿ ಕಲಿಸುವ ಅನಿವಾರ್ಯ ಯುದ್ಧವೇ ಆಗಿದ್ದರೆ ಅದಕ್ಕೆ ನಾವೆಲ್ಲಾ ಸಿದ್ಧರಾಗಬೇಕಾಗುತ್ತದೆ. ಒಬ್ಬರಿಗೆ ಬುದ್ಧಿ ಕಲಿಸಲು ಚಾಟಿ ಏಟು ಬೀಳಬೇಕಾಗುತ್ತದೆ. ಅದು ನಮ್ಮ ಧರ್ಮದ ಸಿದ್ಧಾಂತ ಕೂಡ. ಭಾರತ ಶಾಂತಿಗೂ, ಕ್ರಾಂತಿಗೂ ಸಿದ್ಧವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಭಯೋತ್ಪಾದನೆ ನಿಲ್ಲಬೇಕು’ ಎಂದರು.

‘ಎದುರಾಳಿಯ ಶಕ್ತಿ ಸಾಮರ್ಥ್ಯ ನೋಡಿಕೊಂಡು ನಮ್ಮ ರೂಪುರೇಷೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಭವಿಷ್ಯದ ಸುಂದರ ದಿನಗಳನ್ನು ಮಕ್ಕಳಿಗೆ ಸಿಗಬೇಕಾದರೆ ತ್ಯಾಗಕ್ಕೆ ಸಿದ್ಧರಾಗಬೇಕಾಗುತ್ತದೆ’ ಎಂದು ತಿಳಿಸಿದರು.

‘ಭಾರತ ಶಾಂತಿಪ್ರಿಯ ರಾಷ್ಟ್ರ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿದೆ. ಧರ್ಮ ರಕ್ಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಶರಣರ ವಚನಗಳು, ವಿಚಾರಧಾರೆಗಳ ಸಂಬಂಧ ಸಂಘರ್ಷ ಶುರುವಾಯಿತೋ ಆಗ ಶರಣರು ಕೂಡ ಕೈಯಲ್ಲಿ ಖಡ್ಗ ಹಿಡಿದರು. ಹೀಗಾಗಿ, 900 ವರ್ಷ ಕಳೆದರೂ ವಚನ ಸಾಹಿತ್ಯ ಉಳಿದುಕೊಂಡಿವೆ. ಧರ್ಮ ರಕ್ಷಣೆಗೆ ಕ್ರಾಂತಿ ಮಾಡಬೇಕಾಗುತ್ತದೆ’ ಎಂದರು.

‘ನಾವು ಶಾಂತಿದೂತರು ನಿಜ. ಆದರೆ, ನಮ್ಮ ಮನೆಯಲ್ಲಿ ತಾಯಿ, ಸಹೋದರಿ, ಸೊಸೆ ಮೇಲೆ ಯಾರಾದರೂ ಹಲ್ಲೆ ಮಾಡಿದರೆ ಶಾಂತಿಯಿಂದ ಇರಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಾವು ಕೂಡ ಹಸ್ತ ಪ್ರಯೋಗ ಮಾಡಬೇಕಾಗುತ್ತದೆ’ ಎಂದು ಹೇಳಿದರು.

‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.