ADVERTISEMENT

ಪರಾರಿ ಸ್ವಾಮೀಜಿ ಮುರ್ಡೇಶ್ವರದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 18:59 IST
Last Updated 4 ಮಾರ್ಚ್ 2020, 18:59 IST
ದತ್ತಾತ್ರೇಯ ಅವಧೂತ ಸ್ವಾಮೀಜಿ
ದತ್ತಾತ್ರೇಯ ಅವಧೂತ ಸ್ವಾಮೀಜಿ   

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಪತ್ತೆ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿರುವ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಸ್ವಾಮೀಜಿಯನ್ನು ಬುಧವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಪದೇಪದೇ ತನ್ನ ನೆಲೆ ಬದಲಿಸುತ್ತಾ ತಲೆಮರೆಸಿಕೊಂಡಿದ್ದ ಸ್ವಾಮೀಜಿಯು ಮುರ್ಡೇಶ್ವರದ ವಸತಿ ಗೃಹವೊಂದರಲ್ಲಿ ಯುವತಿ ಜತೆ ತಂಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಭೀಮಲಿಂಗೇಶ್ವರ ದೇವಾಲಯ ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡು ತಿಂಗಳ ಹಿಂದೆಯಷ್ಟೇ ಹೊಳಲಿಗೆ ಬಂದಿದ್ದರು. ದೇವಾಲಯದ ಮಠದಲ್ಲಿ ತಂಗಿದ್ದ ಸ್ವಾಮೀಜಿಯು ಗ್ರಾಮದ ಯುವತಿಯರಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದರು. ಪಾದೆ ಪೂಜೆಗೆ ಬಂದಿದ್ದ ಯುವತಿಯನ್ನು ವರಿಸಿದ ಸ್ವಾಮೀಜಿಯು ಫೆ.24ರಂದು ಆಕೆಯ ಜತೆ ಪರಾರಿಯಾಗಿದ್ದರು.

ADVERTISEMENT

ಬಳಿಕ ಯುವತಿ ಪೋಷಕರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಷ್ಟರಲ್ಲಿ ಯುವತಿಯನ್ನು ವಿವಾಹವಾದ ಸ್ವಾಮೀಜಿಯು ಬಂಧನ ಭೀತಿಯಿಂದಾಗಿ ಆಂಧ್ರಪ್ರದೇಶದ ತಿರುಪತಿ, ರಾಜ್ಯದ ದಾವಣಗೆರೆ, ಹಾವೇರಿ ಜಿಲ್ಲೆ ಸೇರಿದಂತೆ ಹಲವೆಡೆ ಆಶ್ರಯ ಪಡೆದಿದ್ದರು. ಪೊಲೀಸರು ಸ್ವಾಮೀಜಿಯ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಸತತ 9 ದಿನಗಳಿಂದ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು.

ಸ್ವಾಮೀಜಿಯು ಭೀಮಲಿಂಗೇಶ್ವರ ದೇವಾಲಯಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ₹ 10 ಲಕ್ಷವನ್ನು ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರು. ಅಲ್ಲದೇ, ಬೆಂಗಳೂರಿನ ಭಕ್ತರು ಉಡುಗೊರೆಯಾಗಿ ಕೊಟ್ಟಿದ್ದ ಸುಮಾರು ₹ 50 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನೂ ಕೊಂಡೊಯ್ದಿದ್ದರು.

ಕೇಶ ವಿನ್ಯಾಸ ಬದಲು: ಪೊಲೀಸರಿಗೆ ಗುರುತು ಸಿಗದಂತೆ ಸ್ವಾಮೀಜಿಯು ಮುಖ ಕ್ಷೌರ ಮಾಡಿಸಿದ್ದಾರೆ. ಅಲ್ಲದೇ, ಕೇಶ ವಿನ್ಯಾಸ ಸಹ ಬದಲಿಸಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಸ್ವಾಮೀಜಿ ವಿರುದ್ಧ ರಾಜ್ಯದ ವಿವಿಧೆಡೆ ವಂಚನೆ ಹಾಗೂ ಕೊಲೆ ಯತ್ನ ಪ್ರಕರಣ ಸಹ ದಾಖಲಾಗಿವೆ ಎಂದು ತಿಳಿದುಬಂದಿದೆ.

ಸ್ವಾಮೀಜಿ ಹಾಗೂ ಯುವತಿಯನ್ನು ಕರೆದುಕೊಂಡು ಮುರ್ಡೇಶ್ವರದಿಂದ ಹೊರಟಿರುವ ಸಿಬ್ಬಂದಿಯು ಗುರುವಾರ (ಮಾರ್ಚ್‌ 5) ಜಿಲ್ಲೆಗೆ ಬರಲಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.