ಬಂಗಾರಪೇಟೆ: ತಾಲ್ಲೂಕಿನ ರೈತರು ಕಡಿಮೆ ಬಂಡವಾಳದೊಂದಿಗೆ ಪರ್ಯಾಯ ಬೆಳೆಯಾಗಿ ಸಿಹಿ ಕುಂಬಳವನ್ನು ಬೆಳೆದು ಉತ್ತಮ ಆದಾಯ ಪಡೆಯಲು ಮುಂದಾಗಿದ್ದಾರೆ.
ವೈವಿಧ್ಯ ಕೃಷಿ ಬೆಳೆಗೆ ಹೆಸರಾದ ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳ ಪ್ರಯೋಗ ಹೆಚ್ಚುತ್ತಿದೆ. ತಾಲ್ಲೂಕಿನ ದಾಸೇಗೌಡನೂರು ಗ್ರಾಮದ ರೈತ ವೆಂಕಟೇಶಪ್ಪ ಎರಡು ಎಕರೆ ಹೊಲದಲ್ಲಿ ಸಿಹಿ ಕುಂಬಳ ಬೆಳೆದಿದ್ದು ₹ 1.50 ಲಕ್ಷ ಆದಾಯ ಗಳಿಸಿದ್ದಾರೆ. ಆರ್ಥಿಕ ಸ್ವಾವಲಂಬನೆಗೆ ಅಲ್ಪಾವಧಿ ಬೆಳೆಯಾದ ತರಕಾರಿ ಸಹಕಾರಿಯಾಗಿದ್ದು ರೈತರು ಇತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ತರಕಾರಿ ಬೆಳೆಯಲ್ಲಿ ಒಂದಾದ ಕಡಿಮೆ ಖರ್ಚು, ಅಲ್ಪ ನೀರು ಬೇಡುವ ಕುಂಬಳ ಇದೀಗ ತಾಲ್ಲೂಕಿನ ರೈತರ ನೆಚ್ಚಿನ ಕೃಷಿಯಾಗಿದೆ.
ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊದಂತಹ ತರಕಾರಿ ಬೆಳೆಗಳೇ ಈ ಭಾಗದಲ್ಲಿ ಹೆಚ್ಚು ಕಾಣಬಹುದು. ಇವುಗಳ ಜೊತೆ ಇದೀಗ ಕುಂಬಳಕಾಯಿ ಬೆಳೆ ಹೆಚ್ಚಾಗಿ ಕಾಣಸಿಗುತ್ತಿದೆ. ‘ಬೆಂಗಳೂರು, ಮಂಗಳೂರು, ಮುಂಬೈ ಸೇರಿದಂತೆ ಅನೇಕ ಪ್ರದೇಶಗಳಿಗೆ ಇಲ್ಲಿನ ಕುಂಬಳ ರಫ್ತಾಗುತ್ತಿದೆ. ವ್ಯಾಪಾರಿಗಳು ನೇರ ಹೊಲಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ. ಸಾರಿಗೆ ವೆಚ್ಚವೂ ಉಳಿಯುವುದಲ್ಲದೇ, ಓಡಾಟದ ಸಮಯವೂ ಉಳಿಯುತ್ತದೆ. ಹೀಗಾಗಿ ನಮಗೆಲ್ಲಾ ಈ ಬೆಳೆ ಹೆಚ್ಚು ಆಪ್ತವಾಗುತ್ತಿದೆ’ ಎನ್ನುತ್ತಾರೆ ಕುಂಬಳ ಬೆಳೆದಿರುವ ರೈತ ವೆಂಕಟೇಶಪ್ಪ.
ಎರಡು ಎಕರೆ ಜಮೀನಿನಲ್ಲಿ ಸುಮಾರು 30 ಟನ್ ಕುಂಬಳಕಾಯಿ ಬೆಳೆದಿವೆ. ಎಕರೆಗೆ 15 ಸಾವಿರದಂತೆ ಎರಡು ಎಕರೆಗೆ ಬೀಜ, ಗೊಬ್ಬರ, ಕಳೆ, ಔಷಧ ಸೇರಿ ₹ 30 ಸಾವಿರ ಖರ್ಚಾಗಿದೆ. ಒಂದು ಕುಂಬಳಕಾಯಿ ಕನಿಷ್ಠ 8 ರಿಂದ 10 ಕೇಜಿ ತೂಗುತ್ತದೆ. ಒಂದು ಬಳ್ಳಿಗೆ ಕನಿಷ್ಠ ನಾಲ್ಕರಿಂದ ಐದು ಕಾಯಿಗಳು ಬಿಟ್ಟಿವೆ. ಎಲ್ಲ ಸೇರಿ 30 ಟನ್ ಉತ್ಪನ್ನ ದ ಮೂಲಕ ₹ 1.50 ಲಕ್ಷ ಆದಾಯ ಗಳಿಸಬಹುದು ಎಂದು ಮಾಹಿತಿ ನೀಡುತ್ತಾರೆ ರೈತ ವೆಂಕಟೇಶಪ್ಪ.
ರೈತರು ಒಂದೇ ಬೆಳೆಗೆ ಸೀಮಿತವಾಗದೇ ವೈವಿಧ್ಯ ತರಕಾರಿ ಬೆಳೆಯಬೇಕು. ಹೊಲವೇ ಮಾರುಕಟ್ಟೆ ಆದರೆ ವರ್ತಕ, ರೈತ ಇಬ್ಬರಿಗೂ ಅನುಕೂಲ. ಈಗ ಕುಂಬಳಕ್ಕೆ ಮಾರುಕಟ್ಟೆಯಲ್ಲಿ ಕೇಜಿಗೆ ₹ 18 ರೂಪಾಯಿಗಳ ಬೆಲೆಯಿದೆ. ವರ್ತಕರು ಹೊಲಕ್ಕೆ ಬಂದು ಖರೀದಿಸುವುದರಿಂದ ಕನಿಷ್ಠ ₹ 10 ರೂಪಾಯಿಗೆ ಮಾರಾಟವಾಗುತ್ತದೆ ಎನ್ನುತ್ತಾರೆ ಅವರು.
ಕೋಲಾರ ಜಿಲ್ಲೆಯ ರೈತರೆಲ್ಲರೂ ಒಂದೇ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆದು ಕೈ ಸುಟ್ಟುಕೊಳ್ಳುವುದುಂಟು. ಅದರ ಬದಲು ಕೆಲವು ರೈತರು ಬೇರೆ ಬೇರೆ ತರಕಾರಿ ಹಾಗೂ ಸಿಹಿ ಕುಂಬಳ ಮತ್ತು ಬೂದು ಕುಂಬಳವನ್ನು ಪರ್ಯಾಯ ಬೆಳೆಗಳಾಗಿ ಬೆಳೆದು ಆದಾಯ ಮಾಡಿಕೊಳ್ಳಬಹುದು. ಎರಡೂ ಬಗೆಯ ಕುಂಬಳಗಳನ್ನು ಬೆಳೆಯಲು ಕಡಿಮೆ ನಿರ್ವಹಣೆ ಮತ್ತು ಕಡಿಮೆ ಬಂಡವಾಳದ ಅವಶ್ಯವಿರುವ ಕಾರಣ ಅಪಾಯ ಕಡಿಮೆ ಎನ್ನುತ್ತಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು.
ಕುಂಬಳ ಮೂರು ತಿಂಗಳ ಬೆಳೆಯಾಗಿದ್ದು, ತಾಲ್ಲೂಕಿನಲ್ಲಿ ನವರಾತ್ರಿ ಮತ್ತು ದೀಪಾವಳಿ ಸಮಯಕ್ಕೆ ಇಳುವರಿ ಬರುವಂತೆ ರೈತರು ಬೂದಕುಂಬಳ ಬೆಳೆಯುತ್ತಾರೆ. ಸಂಕ್ರಾಂತಿ ಹಬ್ಬಕ್ಕೂ ಮುಂಚೆ ಸಿಹಿ ಕುಂಬಳ ಇಳುವರಿ ಬರುವಂತೆ ಸಿಹಿ ಕುಂಬಳ ಬೆಳೆಯುತ್ತಾರೆ. ಇದರಿಂದ ವ್ಯಾಪಾರವೂ ಹೆಚ್ಚು, ಆದಾಯವೂ ಹೆಚ್ಚು. ಆದರೆ ಕುಂಬಳವನ್ನು ತಿಂಗಳುಗಳ ಕಾಲ ಕೆಡದಂತೆ ಶೇಖರಣೆ ಮಾಡಲು ಬರುವುದಿಲ್ಲ. ಆದ್ದರಿಂದ ಆಯಾ ಕಾಲಕ್ಕೆ ಬಂದ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.