ADVERTISEMENT

ಕೆಜಿಎಫ್‌ ಟಿಎಪಿಸಿಎಂಎಸ್ ಚುನಾವಣೆ: ಕಣದಲ್ಲಿ 20 ಅಭ್ಯರ್ಥಿಗಳು

ಬಿಜೆಪಿಯಲ್ಲಿ ಗುಂಪುಗಾರಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:11 IST
Last Updated 31 ಮಾರ್ಚ್ 2022, 4:11 IST
ಕೆಜಿಎಫ್‌ ಟಿಎಪಿಸಿಎಂಎಸ್‌ಗೆ ಸಹಕಾರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಟಿ. ಸದಾನಂದರೆಡ್ಡಿ, ಶಂಕರ್‌ ಹಾಗೂ ಕೆ.ವಿ. ಲಕ್ಷ್ಮೀನಾರಾಯಣ
ಕೆಜಿಎಫ್‌ ಟಿಎಪಿಸಿಎಂಎಸ್‌ಗೆ ಸಹಕಾರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಟಿ. ಸದಾನಂದರೆಡ್ಡಿ, ಶಂಕರ್‌ ಹಾಗೂ ಕೆ.ವಿ. ಲಕ್ಷ್ಮೀನಾರಾಯಣ   

ಕೆಜಿಎಫ್‌: ನೂತನವಾಗಿ ರಚಿತವಾಗಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌)ಕ್ಕೆ ಏಪ್ರಿಲ್‌ 3ರಂದು ಚುನಾವಣೆ ನಡೆಯಲಿದ್ದು, ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಹಕಾರ ಸಂಘಗಳ ಮೂಲಕ ಈಗಾಗಲೇ ಬೇತಮಂಗಲದ ವ್ಯವಸಾಯ ಸೇವಾ ಸಹಕಾರ ಸಂಘದ ಶಂಕರ್‌, ಕ್ಯಾಸಂಬಳ್ಳಿಯ ಎಲ್‌ಎಸ್‌ಸಿಎಸ್‌ನ ಟಿ. ಸದಾನಂದರೆಡ್ಡಿ, ಕೆಂಪಾಪುರದ ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ವಿ. ಲಕ್ಷ್ಮೀನಾರಾಯಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಬಿ’ ವರ್ಗದ ಸಾಮಾನ್ಯ ಸ್ಥಾನದಿಂದ ಎಸ್‌. ಕೃಷ್ಣಮೂರ್ತಿ, ಆರ್‌. ಜಯರಾಮರೆಡ್ಡಿ. ಎಂ. ನಾರಾಯಣಸ್ವಾಮಿ, ಪಿ.ಎನ್. ಪುರುಷೋತ್ತಮ, ಮುನಿಸ್ವಾಮಿ ರೆಡ್ಡಿ, ಆರ್. ಮುನೇಗೌಡ, ಎಂ. ಲಕ್ಷ್ಮೀಪತಿ, ಶ್ರೀನಿವಾಸರೆಡ್ಡಿ, ‘ಬಿ’ ವರ್ಗದ ಹಿಂದುಳಿದ ಪ್ರವರ್ಗ ‘ಎ’ ಮೀಸಲು ಸ್ಥಾನಕ್ಕಾಗಿ ಕೆ.ಎನ್‌. ಮಂಜುನಾಥ್‌, ಜಿ.‍‍ಪಿ. ವೆಂಕಟೇಶಪ್ಪ, ಸುಜಾತಾ, ಎಸ್‌. ಸುಧಾಕರ್‌, ‘ಬಿ’ ವರ್ಗದ ಮಹಿಳಾ ಮೀಸಲು ಸ್ಥಾನಕ್ಕಾಗಿ ನೀಲಮ್ಮ, ಶ್ಯಾಮಲಮ್ಮ, ಬಿ. ಸುಮಾ, ಎಂ.ವಿ. ಸುಮಾ, ‘ಬಿ’ ವರ್ಗದ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕಾಗಿ ನರಸಿಂಹ ಮತ್ತು ವಿ. ವೆಂಕಟೇಶ್‌, ‘ಬಿ’ ವರ್ಗದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಪ್ಪ ಮತ್ತು ಎಸ್‌. ಪ್ರವೀಣ್‌ ಕುಮಾರ್ ಸ್ಪರ್ಧೆಯಲ್ಲಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಸ್‌. ಪ್ರವೀಣ್‌ಕುಮಾರ್‌ ಅವರು ಮಾಜಿ ಶಾಸಕ ವೈ. ಸಂಪಂಗಿ ಅವರ ಪುತ್ರರಾಗಿದ್ದಾರೆ. ಅಲ್ಲದೆ, ಟಿಎಪಿಸಿಎಂಎಸ್‌ನ ಮುಖ್ಯ ಪ್ರವರ್ತಕರೂ ಆಗಿದ್ದಾರೆ.

ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಒಟ್ಟಾಗಿ ಎದುರಿಸುತ್ತಿದೆ. ಯಾವುದೇ ಭಿನ್ನಾಭಿಪ್ರಾಯ ಕಾಣುತ್ತಿಲ್ಲ. ಆದರೆ, ಬಿಜೆಪಿಯಲ್ಲಿ ಮಾಜಿ ಶಾಸಕ ಸಂಪಂಗಿ ಮತ್ತು ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಗುಂಪು ಎಂಬುದಾಗಿ ಗುರ್ತಿಸಲ್ಪಟ್ಟಿದೆ. ನಾಮಪತ್ರವನ್ನು ಎರಡೂ ಗುಂಪಿನವರೂ ಸಲ್ಲಿಸಿದ್ದರು. ಟಿಎಪಿಸಿಎಂಎಸ್‌ನಲ್ಲಿ ಸದಸ್ಯತ್ವ ಬಯಸಿದವರಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಿ ಎಂ. ರೂಪಕಲಾ ಈ ಮೊದಲು ಪ್ರತಿಭಟನೆ
ನಡೆಸಿದ್ದರು.

ಬಿಜೆಪಿಯ ಪ್ರವೀಣ್‌ ಕುಮಾರ್ ಮುಖ್ಯ ಪ್ರವರ್ತಕರಾಗಿದ್ದರಿಂದ ತಮ್ಮ ಬೆಂಬಲಿಗರನ್ನು ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಬಲಿಷ್ಠವಾಗಿರುವಂತೆ ಕಂಡು ಬರುತ್ತಿದೆ. ಕೇವಲ 614 ಮತದಾರರಿದ್ದು, ಓಲೈಕೆಗೆ ಎರಡೂ ಪಕ್ಷದವರು ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದೆ ಇರುವುದರಿಂದ ಒಳ ಒಪ್ಪಂದ ನಡೆಯುವ ಸಂಭವ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.