ADVERTISEMENT

ಮಣ್ಣಿನ ಮಕ್ಕಳಿಗೆ ಪಾಠ ಕಲಿಸಿ; ಎಚ್‌ಡಿಡಿ–ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 13:51 IST
Last Updated 1 ಅಕ್ಟೋಬರ್ 2021, 13:51 IST
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿದರು
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿದರು   

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯನ್ನು ಜೆಡಿಎಸ್‌ನವರು ಟೀಕಿಸುತ್ತಾರೆ. ಆದರೂ ತಾವು ಮಣ್ಣಿನ ಮಕ್ಕಳೆಂದು ಕುಮಾರಸ್ವಾಮಿ ಹಾಗೂ ದೇವೇಗೌಡರು ಹೇಳಿಕೊಳ್ಳುತ್ತಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ರೈತರ ಮಕ್ಕಳು. ಅವರು ಮಣ್ಣಿನ ಮಕ್ಕಳು. ಆ ಮಣ್ಣಿನ ಮಕ್ಕಳು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೆ.ಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಕೊಳವೆ ಬಾವಿಗಳಲ್ಲಿ ಪಾತಾಳಕ್ಕೆ ಕುಸಿದಿದ್ದ ನೀರು ಈಗ ೩೦೦ರಿಂದ ೫೦೦ ಅಡಿಗೆ ಸಿಗುತ್ತಿದೆ. ಮಣ್ಣಿನ ಮಕ್ಕಳು ಇದನ್ನ ಟೀಕಿಸುತ್ತಾರೆ. ಅವರಿಗೆ ಜನ ತಕ್ಕ ಪಾಠ ಕಲಿಸಬೇಕು’ ಎಂದು ಗುಡುಗಿದರು.

ADVERTISEMENT

‘ರಾಜ್ಯದಲ್ಲಿ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತೆ. ಆಗ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಹಿಂದೆ ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇರಲಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರದಲ್ಲಿ ಹಣವೇ ಇಲ್ಲ. ನಮ್ಮ ಸರ್ಕಾರ 7 ಕೆ.ಜಿ ಅಕ್ಕಿ ಕೊಡುತ್ತಿತ್ತು. ಬಿಜೆಪಿಯವರು ಅದರಲ್ಲಿ 2 ಕೆ.ಜಿ ಕಡಿಮೆ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು’ ಎಂದು ಕುಟುಕಿದರು.

‘ಸ್ವಯಂಪ್ರೇರಿತರಾಗಿ ಮತಾಂತರಗೊಂಡರೆ ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಯಾವುದೇ ವ್ಯಕ್ತಿಯನ್ನು ಬಲವಂತದಿಂದ ಮತಾಂತರ ಮಾಡಬಾರದು’ ಎಂದರು.

ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದ್ದೆ ಉಡುಗೊರೆಯಾಗಿ ಕೊಟ್ಟು ಸನ್ಮಾನಿಸಿದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.