ADVERTISEMENT

ಟಿವಿ ಶೋ ನೋಡಿ ಹಣ ಕಳೆದುಕೊಂಡ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 16:38 IST
Last Updated 18 ಆಗಸ್ಟ್ 2020, 16:38 IST

ಕೆಜಿಎಫ್‌: ಟಿವಿಯಲ್ಲಿ ಬರುವ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರಿ ಉತ್ತರ ಹೇಳಿದ್ದ ಗುಟ್ಟಹಳ್ಳಿಯ (ಬಂಗಾರುತಿರುಪತಿ) ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಅನಾಮಿಕ ಕರೆಗೆ ಉತ್ತರಿಸಿ ಹಣ ಕಳೆದುಕೊಂಡಿದ್ದಾರೆ.

ಗುಟ್ಟಹಳ್ಳಿಯ ಶಿಕ್ಷಕ ಚೆನ್ನಬಸವರಾಜ ಅವರು ಆಗಸ್ಟ್‌ 15ರಂದು ‘ಮೂವಿ ಪ್ಲಸ್‌’ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸರಿಯಾದ ಉತ್ತರ ಹೇಳಿದವರಿಗೆ ಬಹುಮಾನ ಇದೆ ಎಂದು ಘೋಷಿಸಲಾಗಿತ್ತು. ಅದರಂತೆ ಕರೆ ಮಾಡಿದ ಚೆನ್ನಬಸಬರಾಜ ಅವರು ಉತ್ತರವನ್ನು ಹೇಳಿದ್ದರು. ಎರಡು ದಿನದ ನಂತರ ದಯಾನಂದ ಮಿಶ್ರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ, ನೀವು ಕಾರ್ಯಕ್ರಮದಲ್ಲಿ ಗೆದ್ದಿದ್ದೀರಿ. ಹಣ ಪಡೆಯಲು ಸೆಕ್ಯುರಿಟಿ ಹಣವನ್ನು ಕಟ್ಟಬೇಕು ಎಂದು ಹೇಳಿದರು. ಅವರ ಮಾತನ್ನು ನಂಬಿದ ಶಿಕ್ಷಕ, ಅಪರಿಚಿತ ಸೂಚಿಸಿದ ಬ್ಯಾಂಕ್ ಖಾತೆಗೆ ₹ 24,500 ರೂಪಾಯಿ ಕಟ್ಟಿದರು. ಆದರೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಮೋಸ ಹೋಗಿದ್ದು ತಿಳಿದುಬಂದಿತ್ತು. ಚೆನ್ನಬಸವರಾಜ ನೀಡಿದ ದೂರಿನ ಮೇರೆಗೆ ಸಿಇಎನ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT