ADVERTISEMENT

10 ಸಾವಿರ ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:12 IST
Last Updated 13 ಮೇ 2022, 2:12 IST
ಬೇತಮಂಗಲ ಸಮೀಪದ ವೆಂಕಟಾಪುರ ಗ್ರಾಮದ ರೈತ ಜಯರಾಮ್ ರೆಡ್ಡಿ ಅವರ ಮಾವಿನ ತೋಟದಲ್ಲಿ ಗಾಳಿ, ಮಳೆಗೆ ಮಾವಿನಕಾಯಿಗಳು ನೆಲಕಚ್ಚಿವೆ
ಬೇತಮಂಗಲ ಸಮೀಪದ ವೆಂಕಟಾಪುರ ಗ್ರಾಮದ ರೈತ ಜಯರಾಮ್ ರೆಡ್ಡಿ ಅವರ ಮಾವಿನ ತೋಟದಲ್ಲಿ ಗಾಳಿ, ಮಳೆಗೆ ಮಾವಿನಕಾಯಿಗಳು ನೆಲಕಚ್ಚಿವೆ   

ಶ್ರೀನಿವಾಸಪುರ: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಮಾವು ಫಸಲಿನ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಆಗ್ರಹಿಸಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ ಮಾವಿನ ಫಸಲು ನಾಶವಾಗಿದೆ. ತಾಲ್ಲೂಕಿನ ಯಲ್ದೂರು, ರೋಣೂರು ಹಾಗೂ ನೆಲವಂಕಿ ಹೋಬಳಿಯಲ್ಲಿ ಅತಿಹೆಚ್ಚಿನ ಬೆಳೆ ಹಾನಿಯಾಗಿದೆ. ಸುಮಾರು 5 ಸಾವಿರ ಟನ್ ಮಾವು ಉದುರಿ ಬಿದ್ದಿದೆ. ಟೊಮೆಟೊ ಬೆಳೆಯ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾವಿನ ಫಸಲು ನಷ್ಟ ಅನುಭವಿಸಿರುವ ರೈತರಿಗೆ ಒಂದು ಹೆಕ್ಟೇರ್‌ಗೆ ₹ 50 ಸಾವಿರ ಪರಿಹಾರ ನೀಡಬೇಕು. ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಮಾವು ಸೇರಿದಂತೆ ಅಗಾಧ ಪ್ರಮಾಣದ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಆದರೆ, ಯಾವುದೇ ಉತ್ಪನ್ನವನ್ನು ಸಂಸ್ಕರಿಸುವ ಘಟಕ ಇಲ್ಲ. ಸರ್ಕಾರ ಈಗಲಾದರೂ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.