ADVERTISEMENT

ಕೋಲಾರ: ಟಿಇಟಿ ಪರೀಕ್ಷೆಗೆ 442 ಮಂದಿ ಗೈರು

ಜಿಲ್ಲೆಯ 22 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:17 IST
Last Updated 9 ಡಿಸೆಂಬರ್ 2025, 6:17 IST
ಕೋಲಾರ ನಗರದಲ್ಲಿ ಭಾನುವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆದಿದ್ದು, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿ.ಪಂ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ ಭೇಟಿ ನೀಡಿ ಪರಿಶೀಲಿಸಿದರು
ಕೋಲಾರ ನಗರದಲ್ಲಿ ಭಾನುವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆದಿದ್ದು, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿ.ಪಂ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ ಭೇಟಿ ನೀಡಿ ಪರಿಶೀಲಿಸಿದರು   

ಕೋಲಾರ: ಶಿಕ್ಷಕರಾಗಿ ನೇಮಕಾತಿ ಹೊಂದಲು ಕನಿಷ್ಠ ಅರ್ಹತೆಯಾಗಿ ಪರಿಗಣಿಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ನಗರದ 22 ಕೇಂದ್ರಗಳಲ್ಲಿ ನಡೆದಿದ್ದು, ಎರಡು ಅವಧಿಯ ಪರೀಕ್ಷೆ ಸೇರಿ ಒಟ್ಟು 442 ಅಭ್ಯರ್ಥಿಗಳು ಗೈರಾಗಿದ್ದರು.

ಬೆ‌ಳಿಗ್ಗೆ ನಡೆದ ಮೊದಲ ಅಧಿವೇಶನದ ಪರೀಕ್ಷೆಯ ಪತ್ರಿಕೆ-1ಕ್ಕೆ ನೋಂದಾಯಿಸಿದ್ದ 2,016 ಮಂದಿ ಪೈಕಿ 1,869 ಅಭ್ಯರ್ಥಿ ಹಾಜರಾಗಿ 147 ಮಂದಿ ಗೈರಾಗಿದ್ದರು. ಶೇ 94.42 ಹಾಜರಾತಿ ಇತ್ತು. ಮಧ್ಯಾಹ್ನ ನಡೆದ 2ನೇ ಅಧಿವೇಶನದ ಪತ್ರಿಕೆ-2ಕ್ಕೆ ನೋಂದಾಯಿಸಿದ್ದ 5,293 ಮಂದಿ ಪೈಕಿ 4,998 ಮಂದಿ ಹಾಜರಾಗಿದ್ದು, 295 ಮಂದಿ ಗೈರಾಗಿದ್ದರು. ಶೇ 92.70 ಹಾಜರಿ ಇತ್ತು.

ಪತ್ರಿಕೆ-1ರ (1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರು) ಪರೀಕ್ಷೆ 14 ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಪತ್ರಿಕೆ-2ರ (6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರು) ಪರೀಕ್ಷೆ ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ 22 ಕೇಂದ್ರಗಳಲ್ಲಿ ನಡೆಯಿತು.

ADVERTISEMENT

ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪರೀಕ್ಷೆ ಸೂಸೂತ್ರವಾಗಿ ನಡೆದಿದೆ ಎಂದು ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ತಿಳಿಸಿದ್ದಾರೆ.

ಗೋಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ಜಿಲ್ಲಾಧಿಕಾರಿಗಳೇ ರಚಿಸಿದ್ದ ತ್ರಿಸದಸ್ಯ ಸಮಿತಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತಲುಪಿಸುವ ಕಾರ್ಯ ನಡೆಸಲಾಗಿದೆ.

ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹಾಗೂ ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ವಿವಿಧ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು. ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.