ADVERTISEMENT

ನಿಯಮ ಗಾಳಿಗೆ ತೂರಿದ ಕೇಂದ್ರ

ಕೋಚ್‌ ಕಾರ್ಖಾನೆ ಯೋಜನೆ ರದ್ದು: ಶಾಸಕ ರಮೇಶ್‌ಕುಮಾರ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:44 IST
Last Updated 10 ಫೆಬ್ರುವರಿ 2020, 14:44 IST
ಕೆ.ಆರ್‌.ರಮೇಶ್‌ಕುಮಾರ್‌
ಕೆ.ಆರ್‌.ರಮೇಶ್‌ಕುಮಾರ್‌   

ಕೋಲಾರ: ‘ಸಂಸದ ಎಸ್.ಮುನಿಸ್ವಾಮಿ ಅವರು ಪ್ರಾಮಾಣಿಕತೆಯಿಂದ ಪಕ್ಷದ ವೇದಿಕೆ ಮತ್ತು ಸಂಸತ್ತಿನಲ್ಲಿ ಚರ್ಚಿಸಿ ರೈಲು ಕೋಚ್‌ ಕಾರ್ಖಾನೆ ಯೋಜನೆ ಅನುಷ್ಠಾನಗೊಳಿಸಲಿ. ಅವರಿಗೆ ಈ ಯೋಜನೆಯ ವಿಚಾರ ಹಾಗೂ ಆಳವಾದ ಅಧ್ಯಯನದ ಅರಿವಿಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಿಡಿಕಾರಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಜನ ಮುನಿಸ್ವಾಮಿ ಅವರಿಗೆ ಅಧಿಕಾರಿ ನೀಡಿದ್ದಾರೆ. ಅವರು ಅಧಿಕಾರ ಜನಪರ ಕೆಲಸಕ್ಕೆ ಬಳಸಲಿ’ ಎಂದು ಕಿವಿಮಾತು ಹೇಳಿದರು.

‘ಇದು ಬಾದ್‌ಶಾ ಸರ್ಕಾರವಲ್ಲ. ಕೇಂದ್ರ ಸರ್ಕಾರವು ನೀತಿ ನಿಯಮ ಗಾಳಿಗೆ ತೂರಿ ರೈಲು ಕೋಚ್‌ ಕಾರ್ಖಾನೆ ಯೋಜನೆ ರದ್ದುಗೊಳಿಸಿದೆ. ದೇಶ ನಡೆಸುವವರಿಗೆ ನಿಯಮ, ಕಾನೂನು ಇಲ್ಲವೇನು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೋಚ್ ಕಾರ್ಖಾನೆ ಮಂಜೂರು ಮಾಡುವಾಗ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಯೋಜನಾ ಸಮಿತಿಗೆ ಹೋಗಿ ಅಲ್ಲಿಂದ ರೈಲ್ವೆ ಮಂಡಳಿಯಲ್ಲಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಬಳಿಕ ಹಣಕಾಸು ಸಚಿವಾಲಯ ಉಪ ಸಮಿತಿಯು ಒಪ್ಪಿಗೆ ನೀಡಿ ಸಂಸತ್ತಿನಲ್ಲಿ ಅಂಕಿತಗೊಂಡು ಆಯವ್ಯಯಕ್ಕೆ ಬಂದಿದ್ದನ್ನು ಬದಲಿಸಲು ಸಾಧ್ಯವಿಲ್ಲ’ ಎಂದರು.

‘ದೇಶದಲ್ಲಿ ಸಾಕಷ್ಟು ಕೋಚ್‌ ಕಾರ್ಖಾನೆಗಳಿವೆ. ಹೀಗಾಗಿ ಹೊಸ ಕೋಚ್ ಕಾರ್ಖಾನೆ ಬೇಕಿಲ್ಲ ಎಂದು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವವರು ಹೇಳುವುದಾದರೆ ಯೋಜನೆಗೆ ನಾವು ಅಂದಾಜು ವೆಚ್ಚ ನಿಗದಿಪಡಿಸಿದ್ದೇವ? ರೈಲ್ವೆ ಮಂಡಳಿ, ಕೇಂದ್ರ ಸರ್ಕಾರ, ರೈಲ್ವೆ ಸಚಿವಾಲಯಕ್ಕೆ ದೇಶಕ್ಕೆ ಎಷ್ಟು ಕೋಚ್‌ ಕಾರ್ಖಾನೆಗಳ ಅಗತ್ಯವಿದೆ ಎಂದು ತಿಳಿದಿರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಉತ್ತರ ಭಾರತದಲ್ಲಿವೆ: ‘ಈಗ ಸ್ಥಾಪನೆಯಾಗಿರುವ ಎಲ್ಲಾ ಕೋಚ್ ಕಾರ್ಖಾನೆಗಳು ಉತ್ತರ ಭಾರತದಲ್ಲಿವೆ. ದಕ್ಷಿಣ ಭಾರತದಲ್ಲೂ ಆಗಬೇಕೆಂದು ಮುನಿಯಪ್ಪ ಅವರ ಅವಧಿಯಲ್ಲಿ ಅಂದಿನ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ವಿಶೇಷ ಆಸಕ್ತಿ ವಹಿಸಿ ಕಾರ್ಖಾನೆ ಮಂಜೂರು ಮಾಡಿದ್ದರು. ಆದರೆ, ಈಗಿನ ಕೇಂದ್ರ ಸರ್ಕಾರ ಏಕಾಏಕಿ ಯೋಜನೆ ರದ್ದುಪಡಿಸಿದೆ. ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಗೊತ್ತಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಕಾನೂನು ಬಲ್ಲವನಾಗಿ, ನಿಯಮಗಳ ಪರಿಚಯ ಇದ್ದವನಾಗಿ ಕೋಚ್ ಕಾರ್ಖಾನೆ ಸಂಬಂಧ ಇದ್ದ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಯನ್ನು ಅಂದಿನ ಸರ್ಕಾರ ಮುಗಿಸಿದ್ದರಿಂದ ಕಾರ್ಖಾನೆ ಆಗಿಯೇ ಆಗುತ್ತದೆ ಎಂದು ಧೈರ್ಯದಿಂದ ಹೇಳಿದ್ದೆ. ಇಂದಿಗೂ ಆ ಮಾತಿಗೆ ಬದ್ಧ. ಆದರೆ, ದೇಶ ನಡೆಸುವವರು ಈ ಮನೋಭಾವಕ್ಕೆ ಬಂದು ಬಿಟ್ಟರೆ ಗತಿಯೇನು?’ ಎಂದು ಕಳವಳ ವ್ಯಕ್ತಪಡಿಸಿದರು.

ಹೋರಾಟ ಸಂತೋಷ: ‘ಮಾಜಿ ಸಂಸದ ಮುನಿಯಪ್ಪ ಅವರು ಕೋಚ್ ಕಾರ್ಖಾನೆಗಾಗಿ ಹೋರಾಟ ನಡೆಸುವುದಾದರೆ ಸಂತೋಷ. ನಾನು ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ನೀಲಗಿರಿ ತೆರವು, ನೀರು, ಆರೋಗ್ಯ ಕೊಡಿಸಲು ಹೀಗೆ ಹೋರಾಟವೇ ನನ್ನ ಬದುಕಾಗಿರುವಾಗ ಕೋಚ್ ಕಾರ್ಖಾನೆಗೆ ಹೊಸದಾಗಿ ಹೋರಾಟ ಆರಂಭಿಸುವ ಅಗತ್ಯವಿಲ್ಲ’ ಎಂದರು.

‘ಎತ್ತಿನಹೊಳೆ ಯೋಜನೆಗೆ ತುಮಕೂರಿನ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ಬಳಿ ಜಲಾಶಯ ನಿರ್ಮಿಸಬೇಕಿದೆ. ಈ 2 ತಾಲ್ಲೂಕಿನ ರೈತರ ೨ ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೈಗಾರಿಕೆ ದೃಷ್ಟಿಯಿಂದ ಎಕರೆಗೆ ₹ ೨೮ ಲಕ್ಷ ಪರಿಹಾರ ನೀಡಲಾಗುತ್ತದೆ. ಕೊರಟಗೆರೆ ತಾಲ್ಲೂಕು ಹಿಂದುಳಿದ ಪ್ರದೇಶವಾಗಿರುವುದರಿಂದ ಎಕರೆಗೆ ₹ ೯ ಲಕ್ಷವಿದೆ. ಸ್ವಾಧೀನಗೊಳ್ಳುವ ಭೂಮಿ ಮಧ್ಯೆ ೧೦೦ ಮೀಟರ್ ಅಂತರವಿಲ್ಲ, ಪರಿಹಾರದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಇದಕ್ಕೆ ರೈತರು ಒಪ್ಪುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.