ADVERTISEMENT

ಕೇಂದ್ರದ ಸರ್ವಾಧಿಕಾರಿ ಆಡಳಿತ: ಚಂದ್ರಾರೆಡ್ಡಿ ಟೀಕೆ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 16:30 IST
Last Updated 20 ಜನವರಿ 2021, 16:30 IST
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಕೋಲಾರದಲ್ಲಿ ಬುಧವಾರ ರಾಜಭವನ ಚಲೋಗೆ ಚಾಲನೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಕೋಲಾರದಲ್ಲಿ ಬುಧವಾರ ರಾಜಭವನ ಚಲೋಗೆ ಚಾಲನೆ ನೀಡಿದರು.   

ಕೋಲಾರ: ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದು, ಜನರ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಟೀಕಿಸಿದರು.

ಇಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷದ ರಾಜಭವನ ಚಲೋಗೆ ಚಾಲನೆ ನೀಡಿ ಮಾತನಾಡಿ, ‘ದೇಶದ ರೈತರು, ಕಾರ್ಮಿಕರು, ಬಡವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನ ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಯು ರೈತ ವಿರೋಧಿ ಕಾನೂನು ಜಾರಿಗೆ ತರಲು ಹೊರಟಿದೆ’ ಎಂದು ಕಿಡಿಕಾರಿದರು.

‘ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರವು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೆ ಹಟ ಸಾಧಿಸುತ್ತಿದೆ. ಕೇಂದ್ರದ ದುರಾಡಳಿತವು ನೂರಾರು ರೈತರ ಸಾವಿಗೆ ಕಾರಣವಾಗಿದೆ. ಪ್ರಧಾನಿ ಮೋದಿಯವರು ಸೌಜನ್ಯಕ್ಕೂ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಾಗಿಲ್ಲ. ಅವರಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ದೂರಿದರು.

ADVERTISEMENT

‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ಪಕ್ಷದ ವತಿಯಿಂದ ರಾಜ್ಯದಲ್ಲಿ ರಾಜಭವನ ಚಲೋ ನಡೆಸಲಾಗುತ್ತಿದೆ. ಕೇಂದ್ರವು ಕಾಲಮಿತಿಯೊಳಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸುಗ್ರೀವಾಜ್ಞೆ: ‘ಕೇಂದ್ರವು ಎಪಿಎಂಸಿ, ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಗಣ ರಾಜ್ಯೋತ್ಸವದ ದಿನ ಜಾರಿಗೊಳಿಸಲು ಮುಂದಾಗಿದೆ. ಈ ಕಾಯ್ದೆಗಳಿಂದ ರೈತರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಸರ್ಕಾರ ಬಂಡವಾಳಶಾಹಿಗಳ ಹಿತ ಕಾಯಲು ಹೊರಟಿದೆ’ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರಕ್ಕೆ ರೈತರು, ಕಾರ್ಮಿಕರು ಮತ್ತು ಬಡವರ ಬಗ್ಗೆ ಕಾಳಜಿಯಿಲ್ಲ. ಈವರೆಗೆ ಕೃಷಿಕರಿಗೆ ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ರೈತರ ಭೂ ಒಡೆತನ ಕಳೆದುಕೊಳ್ಳಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೇಂದ್ರವು ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕೇಂದ್ರವು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಮಂಜುನಾಥ್, ಕಿಸಾನ್ ಖೇತ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್‌ಗೌಡ, ಮುಖಂಡರಾದ ನಾಗರಾಜ್, ಯಲ್ಲಪ್ಪ, ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.