ADVERTISEMENT

ಕಳೆಗಟ್ಟಿದ ಈದ್‌ ಉಲ್‌ ಫಿತ್ರ್ ಆಚರಣೆ

ಈದ್ಗಾ ಮೈದಾನದಲ್ಲಿ ಮೌನ: ಮನೆ– ಮನದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಮೇ 2020, 12:53 IST
Last Updated 25 ಮೇ 2020, 12:53 IST
ಕೋಲಾರದ ನೂರ್‌ ನಗರದಲ್ಲಿನ ಮುಸ್ಲಿಂ ಕುಟುಂಬವೊಂದು ಕೊರೊನಾ ಸೋಂಕಿನ ಆತಂಕದ ಕಾರಣಕ್ಕೆ ಸೋಮವಾರ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸಿತು.
ಕೋಲಾರದ ನೂರ್‌ ನಗರದಲ್ಲಿನ ಮುಸ್ಲಿಂ ಕುಟುಂಬವೊಂದು ಕೊರೊನಾ ಸೋಂಕಿನ ಆತಂಕದ ಕಾರಣಕ್ಕೆ ಸೋಮವಾರ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸಿತು.   

ಕೋಲಾರ: ಭಾವೈಕ್ಯದ ಸಂಕೇತ ಹಾಗೂ ಹಸಿವಿನ ಮಹತ್ವ ಸಾರುವ ಈದ್‌ ಉಲ್‌ ಫಿತ್ರ್‌ ಹಬ್ಬದ ಆಚರಣೆಯು ನಗರದಲ್ಲಿ ಸೋಮವಾರ ಕಳೆಗಟ್ಟಿತು. ರಂಜಾನ್ ಮಾಸದ ಹಿನ್ನೆಲೆಯಲ್ಲಿ ತಿಂಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬ ಆಚರಿಸಿದರು.

ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ಸಮುದಾಯದವರು ಮನೆಗಳಲ್ಲೇ ಹಬ್ಬ ಆಚರಿಸಿದರು.

ಶ್ವೇತ ವರ್ಣದ ಹೊಸ ಬಟ್ಟೆ ತೊಟ್ಟಿದ್ದ ಮುಸ್ಲಿಂ ಬಾಂಧವರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಮುಖಂಡರು, ಸಮುದಾಯದ ಹಿರಿಯರು ಮತ್ತು ಮಕ್ಕಳು ಪ್ರಾರ್ಥನೆ ಸಲ್ಲಿಸಿ ಮೊಬೈಲ್‌ ಕರೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಪುಟ್ಟ ಮಕ್ಕಳು ಪರಸ್ಪರ ಆಲಂಗಿಸಿ ಶುಭಾಶಯ ಕೋರಿದರು. ಮಹಿಳೆಯರು ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ಸ್ಮರಿಸಿದರು.

ADVERTISEMENT

ಪ್ರತಿ ವರ್ಷ ಈದ್‌ ಉಲ್‌ ಫಿತ್ರ್‌ ಹಬ್ಬದಂದು ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಬಳಿಕ ಮೌಲ್ವಿಗಳು ಧಾರ್ಮಿಕ ಸಂದೇಶ ನೀಡುತ್ತಿದ್ದರು. ಆದರೆ, ಈ ಬಾರಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಮೌಲ್ವಿಗಳು ಮೊಬೈಲ್‌ ಮೂಲಕ ಸಮುದಾಯದವರಿಗೆ ಧಾರ್ಮಿಕ ಸಂದೇಶ ನೀಡಿದರು.

‘ಬಡತನ ಯಾವುದೇ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ. ಆಯಾ ಧರ್ಮದಲ್ಲಿನ ಸ್ಥಿತಿವಂತರು ಬಡವರಿಗೆ ನೆರವು ನೀಡಿದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. -ಶಾಂತಿ ಸೌರ್ಹಾದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಸಹೋದರರಂತೆ ಬಾಳಬೇಕು ದೇಶದ ಏಕತೆ ಮತ್ತು ಘನತೆ ಕಾಪಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಮಾರಕ ಕೊರೊನಾ ಸಂಕಷ್ಟದಿಂದ ಜಗತ್ತಿಗೆ ಮುಕ್ತಿ ಸಿಗಲಿ. ದೇವರು ಆದಷ್ಟು ಬೇಗ ಕೊರೊನಾ ಸೋಂಕು ತೊಲಗಿಸಲಿ. ಸೋಂಕಿನ ವಿರುದ್ಧ ಹೋರಾಡಲು ದೇವರು ಜನರಿಗೆ ಶಕ್ತಿ ಕರುಣಿಸಲಿ’ ಎಂದು ಮೌಲ್ವಿಗಳು ಪ್ರಾರ್ಥಿಸಿದರು.

ಪೊಲೀಸ್‌ ಬಂದೋಬಸ್ತ್‌: ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು. ಆಟೊ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನ, ದರ್ಗಾಗಳು, ಮುಸ್ಲಿಂ ಜನವಸತಿ ಇರುವ ಬಡಾವಣೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮಾಂಸದ ಘಮಲು: ಹಬ್ಬದ ಅಂಗವಾಗಿ ಮನೆಗಳಲ್ಲಿ ಕೋಳಿ ಹಾಗೂ ಕುರಿ ಮಾಂಸದ ವಿಶೇಷ ತಿಂಡಿ ತಿನಿಸು ತಯಾರಿಸಲಾಗಿತ್ತು. ಬಿರಿಯಾನಿ, ಕುಷ್ಕಾ, ಕಬಾಬ್‌, ರೋಟಿ ಮಾಂಸದ ಘಮಲು ಎಲ್ಲೆಲ್ಲೂ ಹರಡಿತ್ತು. ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳ ಬಳಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಹಬ್ಬದೂಟ ಸವಿದರು. ಬಡ ಜನರಿಗೆ ದಿನಸಿ, ಹೊಸ ಬಟ್ಟೆ ಹಾಗೂ ತಿಂಡಿ ತಿನಿಸುಗಳನ್ನು ದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.