ADVERTISEMENT

ಪಕ್ಷ ಭೇದವಿಲ್ಲದೆ ಅಧ್ಯಕ್ಷರ ಆಯ್ಕೆ

ಗುಂಪುಗಾರಿಕೆ ಇಲ್ಲ: ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:56 IST
Last Updated 28 ನವೆಂಬರ್ 2019, 15:56 IST
ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.
ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.   

ಕೋಲಾರ: ‘ಜಿಲ್ಲಾ ಪಂಚಾಯಿತಿ ಇತಿಹಾಸದಲ್ಲಿ ರಾಜಕೀಯ ಬೆರೆಸದೆ ಎಲ್ಲಾ ಪಕ್ಷಗಳ ಸದಸ್ಯರು ಜಿಲ್ಲೆಯ ಅಭಿವೃದ್ಧಿಗಾಗಿ ಒಗ್ಗೂಡಿ ಕಾಂಗ್ರೆಸ್‌ನ ಸಿ.ಎಸ್.ವೆಂಕಟೇಶ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದ್ದಾರೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

ಇಲ್ಲಿ ಗುರುವಾರ ಜಿ.ಪಂ ಅಧ್ಯಕ್ಷಗಾದಿ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣೆ ವಿಷಯವಾಗಿ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯದಲ್ಲಿ ಮಾದರಿ ಜಿಲ್ಲಾ ಪಂಚಾಯಿತಿ ಆಗಿ ಮಾಡುವುದೇ ನಮ್ಮ ಗುರಿ’ ಎಂದರು.

‘ಕೆ.ಎಚ್.ಮುನಿಯಪ್ಪ. ಕೆ.ಆರ್.ರಮೇಶ್‌ಕುಮಾರ್, ಜಿ.ಕೆ.ವೆಂಕಟಶಿವಾರೆಡ್ಡಿ ಹೀಗೆ ಯಾವ ಗುಂಪುಗಳಿಲ್ಲ. ವೆಂಕಟೇಶ್ ಅವರ ಆಯ್ಕೆಗೆ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ, ಮಾಲೂರಿನ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಕೆಜಿಎಫ್‌ ಮಾಜಿ ಶಾಸಕ ವೈ.ಸಂಪಂಗಿ ಪ್ರಮುಖ ಕಾರಣರು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ವೆಂಕಟೇಶ್‌ರ ಗೆಲುವಿಗೆ ಸಹಕಾರ ನೀಡಿದ್ದಾರೆ. ಅಧ್ಯಕ್ಷರ ಚುನಾವಣೆಯಲ್ಲಿ ಶಾಸಕ ರಮೇಶ್‌ಕುಮಾರ್ ಮತ್ತು ಮಾಜಿ ಸಂಸದ ಮುನಿಯಪ್ಪ ಕೈ ಹಾಕಿಲ್ಲ. ಅವರು ಹಸ್ತಕ್ಷೇಪ ಮಾಡಿದ್ದರೆ ನಮ್ಮ ಬಣಕ್ಕೆ ಈ ಗೆಲುವು ದಕ್ಕುತ್ತಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವೆಂಕಟೇಶ್ ನಮ್ಮ ಕಾಂಗ್ರೆಸ್‌ ಪಕ್ಷದವರೇ ಆಗಿದ್ದರೂ ಜಿ.ಪಂ ಸದಸ್ಯರು ಪಕ್ಷ ಭೇದವಿಲ್ಲದೆ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಕಾಂಗ್ರೆಸ್ ಎನ್ನಬಹುದು. ಕಾಂಗ್ರೆಸ್‌ಗೆ ಈ ಸೌಭಾಗ್ಯ ಸಿಕ್ಕಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ ಪರ ಒಲವು ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.