ADVERTISEMENT

ಶಾಲಾ ಪೌಷ್ಟಿಕ ತೋಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 3:49 IST
Last Updated 22 ನವೆಂಬರ್ 2020, 3:49 IST
ಮಾಲೂರು ತಾಲ್ಲೂಕಿನ ಕುಡಿಯನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಪೌಷ್ಟಿಕ ತೋಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ. ನಂಜೇಗೌಡ ಮಾತನಾಡಿದರು
ಮಾಲೂರು ತಾಲ್ಲೂಕಿನ ಕುಡಿಯನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಪೌಷ್ಟಿಕ ತೋಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ. ನಂಜೇಗೌಡ ಮಾತನಾಡಿದರು   

ಮಾಲೂರು: ‘ಮಕ್ಕಳ ಉತ್ತಮ ಆರೋಗ್ಯ, ಪರಿಸರ ನಿರ್ಮಾಣಕ್ಕಾಗಿ ಕೈತೋಟಗಳು ಪ್ರಯೋಜನಕಾರಿಯಾಗಿವೆ’ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

ತಾಲ್ಲೂಕಿನ ಕುಡಿಯನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ನರೇಗಾ ಯೋಜನೆಯಡಿ ಶಾಲಾ ಪೌಷ್ಟಿಕ ತೋಟ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣ ಸಂಬಂಧ ಸಿದ್ಧತೆ ರೂಪಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪರಿಸರ, ಮೂಲಸೌಲಭ್ಯಕ್ಕೆ ಆದ್ಯತೆ ನೀಡಿದಾಗ ಮಾತ್ರ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದರು.

ADVERTISEMENT

15ನೇ ಹಣಕಾಸು ಯೋಜನೆಯಡಿ ಶೇಕಡ 10ರಷ್ಟು ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿಗದಿಪಡಿಸಲಾಗಿದೆ. ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿ ಬೆಳೆಯಲು ಅನುಕೂಲ ಕಲ್ಪಿಸಿಕೊಳ್ಳಬೇಕು. ನೀರಿನ ಸಮಸ್ಯೆ ಇರುವ ಕಡೆ ಶಾಲಾ ಆವರಣದಲ್ಲಿ ಕೊಳವೆಬಾವಿ ಕೊರೆಯಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕೋಚಿಮುಲ್ ವತಿಯಿಂದ ಶಾಲಾ ಮಕ್ಕಳಿಗೆ ಹಾಲಿನ ಪುಡಿ ವಿತರಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮಾದರಿಯಾಗಿರಬೇಕು. ಇಲಾಖಾಧಿಕಾರಿಗಳು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಅನುದಾನ ಅಗತ್ಯವಿರುವ ಅಡುಗೆ ಕೋಣೆಗಳಿಗೆ ಶಾಸಕರ ನಿಧಿಯಿಂದ ಅನುದಾನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತ್ರಿವರ್ಣ ರವಿ, ಇಒ ಕೃಷ್ಣಪ್ಪ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಬಿಇಒ ಕೃಷ್ಣಮೂರ್ತಿ, ಮುಖಂಡರಾದ ಎಸ್.ಟಿ. ನಾರಾಯಣಪ್ಪ, ಶಶಿಧರ್, ಎಸ್.ಎನ್. ರಮೇಶ್ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.