ADVERTISEMENT

ಜಿಲ್ಲೆಯ ಸಮಗ್ರ ಕೃಷಿ ಉತ್ತಮ

‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 15:19 IST
Last Updated 6 ಜನವರಿ 2021, 15:19 IST
ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಬುಧವಾರ ನಡೆದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು.
ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಬುಧವಾರ ನಡೆದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು.   

ಕೋಲಾರ: ‘ಇಸ್ರೇಲ್‌ ಕೃಷಿ ಮಾದರಿಗಿಂತ ಕೋಲಾರ ಜಿಲ್ಲೆಯ ರೈತರ ಸಮಗ್ರ ಕೃಷಿ ಪದ್ಧತಿ ಉತ್ತಮವಾಗಿದೆ. ಜಿಲ್ಲೆಯ ರೈತರು ನಿಜಕ್ಕೂ ಶ್ರಮ ಜೀವಿಗಳು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿ ಮತ್ತು ಬೇವಹಳ್ಳಿಯಲ್ಲಿ ಬುಧವಾರ ನಡೆದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ದೇಶದಲ್ಲೇ ಅತಿ ಹೆಚ್ಚು ಕೆರೆಗಳು ಕೋಲಾರ ಜಿಲ್ಲೆಯಲ್ಲಿವೆ. ನೀರಿನ ಕೊರತೆ ನಡುವೆಯೂ ಯಶಸ್ವಿಯಾಗಿ ಕೃಷಿ ನಿರ್ವಹಣೆ ಮಾಡುತ್ತಿರುವ ಜಿಲ್ಲೆಯ ರೈತರು ಇತರೆ ಜಿಲ್ಲೆಗಳ ರೈತರಿಗೆ ಮಾದರಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜಿಲ್ಲೆಯ ರೈತರಿಗೆ ಮಣ್ಣಿನ ರುಚಿ ಗೊತ್ತಿದೆ. ಇಲ್ಲಿನ ರೈತರು ಬೇರೆ ಬೇರೆ ಜಿಲ್ಲೆಗಳಲ್ಲಿ ಹೋಗಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದಾರೆ. ಕೋವಿಡ್‌ ಬಂದ ನಂತರ ನಗರ ಪ್ರದೇಶದಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗಕ್ಕೆ ಹಿಂದಿರುಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿ ತಾಯಿ ನಂಬಿದವರು ಎಂದಿಗೂ ಹಾಳಾಗಲ್ಲ’ ಎಂದು ತಿಳಿಸಿದರು.

ADVERTISEMENT

‘ನದಿ, ನಾಲೆಯಂತೆ ಮೇಲ್ಮೈ ನೀರಿನ ಮೂಲಗಳಿರುವ ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಸಂಖ್ಯೆ ಹೆಚ್ಚಿದೆ. ಆದರೆ, ಬರಪೀಡಿತ ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳದೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಬ್ಬು ಮತ್ತು ಭತ್ತ ಮಾತ್ರ ಬೆಳೆಯಲಾಗುತ್ತದೆ. ಕಬ್ಬು ಮತ್ತು ಭತ್ತ ಲಾಭದಾಯಕ ಬೆಳೆಗಳಲ್ಲ’ ಎಂದು ಹೇಳಿದರು.

‘ರೈತರು ಬೆಳೆ ಬೆಳೆಯದಿದ್ದರೆ ಇಡೀ ಜಗತ್ತು ಹಸಿವಿನಿಂದ ನರಳಬೇಕಾಗುತ್ತದೆ. ಕೃಷಿ ಹಾಳಾದರೆ ದೇಶ ಉಳಿಯಲ್ಲ. ಆದರೆ, ಪ್ರಕೃತಿಯ ಜತೆಗಿನ ರೈತರ ಬದುಕು ಜೂಜಾಟದಂತಾಗಿದೆ. ರೈತರು ಪ್ರಕೃತಿ ನಂಬಿ ಕೃಷಿ ಮಾಡಬೇಕಿದೆ. ಬೆಳೆ ನಷ್ಟವಾಯಿತು ಅಥವಾ ಕೃಷಿ ಉತ್ಪನ್ನಗಳ ಬೆಲೆ ಕುಸಿಯಿತು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

ಮಣ್ಣು ಪರೀಕ್ಷೆ ಕೇಂದ್ರ: ‘ಕೃಷಿಯಲ್ಲಿ ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಸತ್ವ ಕಾಪಾಡುವುದು ಬಹಳ ಮುಖ್ಯ. ರಾಜ್ಯದಲ್ಲಿ ಸದ್ಯ 247 ಮಣ್ಣು ಪರೀಕ್ಷೆ ಕೇಂದ್ರಗಳಿವೆ. ರಾಜ್ಯದಲ್ಲಿ 27 ಸಾವಿರ ಹಳ್ಳಿಗಳಿದ್ದು, ಪ್ರತಿ ಗ್ರಾ.ಪಂಗೆ ಒಂದು ಮಣ್ಣು ಪರೀಕ್ಷೆ ಕೇಂದ್ರ ತೆರೆಯುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

‘ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಮಣ್ಣು ಪರೀಕ್ಷೆ ವಾಹನ ಸೇವೆ (ಕೃಷಿ ಸಂಜೀವಿನಿ) ಆರಂಭಿಸಲಾಗುತ್ತದೆ. ಜತೆಗೆ ಅಲ್ಲಿನ ರೈತರಿಗೆ ಗುರುತಿನ ಚೀಟಿ ವಿತರಿಸಲಾಗುತ್ತದೆ. ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸಂಖ್ಯೆ ಕಡಿಮೆಯಿದೆ. ರೈತರ ಹಿತದೃಷ್ಟಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ತೆರೆಯಬೇಕು’ ಎಂದು ಸಲಹೆ ನೀಡಿದರು.

‘ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳಿಗೆ ಶೇ 50ರಷ್ಟು ಮೀಸಲಾತಿ, ಹೊಲದಲ್ಲಿ ಹಾವು ಕಚ್ಚಿ ರೈತರು ಮೃತಪಟ್ಟರೆ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಮತ್ತು ಹುಲ್ಲಿನ ಬಣವೆ ಸುಟ್ಟು ಹೋದರೆ ₹ 50 ಸಾವಿರ ಪರಿಹಾರ ನೀಡಿಕೆ ಅಂಶಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.