ADVERTISEMENT

ಜನಪದ ಕಲಾವಿದರ ಬದುಕು ಬರ್ಬರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 11:22 IST
Last Updated 9 ಆಗಸ್ಟ್ 2020, 11:22 IST

ಕೋಲಾರ: ‘ಆಯುಷ್ಮಾನ್ ಕಾರ್ಡ್ ಮಾಡಿಸಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಕೇಂದ್ರ ಸರ್ಕಾರ ಸೂಚಿಸಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ಸಾಯಿ ನಂದಾದೀಪ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಸಹಯೋಗದಲ್ಲಿ ಜನಪದ ಕಲಾವಿದರಿಗೆ ಇಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.

‘ಆರೋಗ್ಯ ಕಾರ್ಡ್‌ ಮಾಡಿ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಆಸ್ಪತ್ರೆಗಳ ವೈದ್ಯಕೀಯ ವೆಚ್ಚದಲ್ಲಿ ಶೇ 30ರಷ್ಟು ರಿಯಾಯಿತಿ ದೊರೆಯಲಿದೆ. ಕಲಾವಿದರು ಆರೋಗ್ಯ ಕಾರ್ಡ್‌ನ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೋವಿಡ್ 19 ಸಂಕಷ್ಟದಿಂದಾಗಿ ಜನಪದ ಕಲಾವಿದರ ಬದುಕು ಬರ್ಬರವಾಗಿದೆ. ಕೊರೊನಾ ಸೋಂಕಿನ ಆತಂಕದ ಕಾರಣಕ್ಕೆ ಕಾರ್ಯಕ್ರಮ ನಡೆಯದಿರುವುದರಿಂದ ಕಲಾವಿದರಿಗೆ ಸಂಪಾದನೆ ಇಲ್ಲವಾಗಿದೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ಕಲಾವಿದರು ತೊಂದರೆಗೆ ಸಿಲುಕಿರುವ ವಿಚಾರವನ್ನೆ ಸರ್ಕಾರದ ಗಮನಕ್ಕೆ ತಂದು ಅನುಕೂಲ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಾಯಿ ನಂದಾದೀಪ ಚಾರಿಟಬಲ್ ಟ್ರಸ್ಟ್‍ನ ಕಾರ್ಯದರ್ಶಿ ಪದ್ಮಾ, ಖಜಾಂಚಿ ಮೋನಿಕಾ, ಉಪ ಕಾರ್ಯದರ್ಶಿ ವೆಂಕಟೇಶ್, ಕರ್ನಾಟಕ ಆರ್ಕೇಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಎಂ.ಅಮರನಾಥ್, ರಾಜ್ಯ ಜನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೃಷ್ಣ, ಜಿಲ್ಲಾ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಮಹೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.