ADVERTISEMENT

ವೈದ್ಯಕೀಯ ಸಿಬ್ಬಂದಿ ಸೇವೆ ಅನನ್ಯ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 14:31 IST
Last Updated 1 ಜುಲೈ 2021, 14:31 IST
ರೋಟರಿ ಸೆಂಟ್ರಲ್‌ ವತಿಯಿಂದ ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಆಮ್ಲಜನಕ ಸಾಂದ್ರಕವನ್ನು ಕೊಡುಗೆಯಾಗಿ ನೀಡಲಾಯಿತು
ರೋಟರಿ ಸೆಂಟ್ರಲ್‌ ವತಿಯಿಂದ ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಆಮ್ಲಜನಕ ಸಾಂದ್ರಕವನ್ನು ಕೊಡುಗೆಯಾಗಿ ನೀಡಲಾಯಿತು   

ಕೋಲಾರ: ‘ಕೋವಿಡ್‌ ಆತಂಕದಲ್ಲೂ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕು ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಅವರ ಸೇವೆ ಅನನ್ಯ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಸ್ಮರಿಸಿದರು.

ಕೋಲಾರ ರೋಟರಿ ಸೆಂಟ್ರಲ್‌ ವತಿಯಿಂದ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಕೊಡುಗೆಯಾಗಿ ನೀಡಿದ ಆಮ್ಲಜನಕ ಸಾಂದ್ರಕ ಸ್ವೀಕರಿಸಿ ಮಾತನಾಡಿ, ‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೊರೊನಾ ಸೋಂಕು ಜನರ ಬದುಕನ್ನು ಬರ್ಬರವಾಗಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೋವಿಡ್‌ 2ನೇ ಅಲೆ ವೇಳೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಮತ್ತು ಬೆಡ್‌ನ ಕೊರತೆ ಎದುರಾಗಿ ಸಾಕಷ್ಟು ಸೋಂಕಿತರು ಮೃತಪಟ್ಟರು. ಈ ಹಿನ್ನೆಲೆಯಲ್ಲಿ ರೋಟರಿ ಸೆಂಟ್ರಲ್‌ ಸಂಸ್ಥೆಯು ಜನರ ಆರೋಗ್ಯದ ದೃಷ್ಟಿಯಿಂದ ಆಮ್ಲಜನಕ ಸಾಂದ್ರಕ ನೀಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಅಮ್ಮನಲ್ಲೂರು ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ಸುಮಾರು 35 ಕಿಲೋ ಮೀಟರ್ ದೂರವಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಕಷ್ಟ ಸಾಧ್ಯ. ಹೀಗಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ ಸಾಂದ್ರಕ ನೀಡಿರುವುದು ರೋಗಿಗಳ ಜೀವ ಉಳಿಸಲು ವರದಾನವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್‌ ಲಸಿಕೆ ಬಗ್ಗೆ ಜನರಲ್ಲಿ ಪೂರ್ವಾಗ್ರಹವಿದೆ. ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ, ಇದು ಸುಳ್ಳು. ಕೋವಿಡ್‌ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಆದ್ದರಿಂದ ಜನರು ವದಂತಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಮ್ಮನಲ್ಲೂರು ಗ್ರಾ.ಪಂ ಅಧ್ಯಕ್ಷೆ ವನಿತಾ, ಸದಸ್ಯ ಸೀನಪ್ಪ, ಪಿಡಿಒ ರವೀಂದ್ರ, ರೋಟರಿ ಸೆಂಟ್ರಲ್ ಸಂಸ್ಥೆ ನೂತನ ಶ್ರೀನಾಥ್‌, ಕಾರ್ಯದರ್ಶಿ ಸುಧಾಕರ್, ಅಮ್ಮನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಕೆ.ಎನ್‌.ಶ್ರೀವೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.