ADVERTISEMENT

ಸಕ್ರಿಯ ಸೋಂಕಿತರ ಸಂಖ್ಯೆ 765ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:33 IST
Last Updated 22 ಸೆಪ್ಟೆಂಬರ್ 2020, 15:33 IST
   

ಕೋಲಾರ: ಜಿಲ್ಲೆಯಲ್ಲಿ ಹೊಸದಾಗಿ 51 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 765ಕ್ಕೆ ಏರಿಕೆಯಾಗಿದೆ.

ಮುಖ್ಯವಾಗಿ ಸೋಂಕಿತರ ಸಂಪರ್ಕದಿಂದ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 19 ಮಂದಿಗೆ ಹಾಗೂ ಸೋಂಕಿತರ ಸಂಪರ್ಕದಿಂದ 27 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 20 ಮಂದಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರಪೀಡಿತ 11 ಮಂದಿಗೆ, ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಹಾಗೂ 4 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ 3 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 9 ಮಂದಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.

ADVERTISEMENT

ಮಾಲೂರು ತಾಲ್ಲೂಕಿನಲ್ಲಿ ಸೋಂಕಿತರ ಸಂಪರ್ಕದಿಂದ 3 ಮಂದಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ಸೋಂಕಿತರ ಸಂಪರ್ಕದಿಂದ 8 ಮಂದಿಗೆ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಬಂದಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ 3 ಮಂದಿಗೆ ಸೋಂಕು ಹರಡಿದ್ದು, ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

73 ಮಂದಿ ಗುಣಮುಖ: ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 73 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮಂಗಳವಾರ ಮನೆಗೆ ಮರಳಿದರು. ಕೋಲಾರ ತಾಲ್ಲೂಕಿನ 14 ಮಂದಿ, ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕಿನ ತಲಾ 10 ಮಂದಿ, ಕೆಜಿಎಫ್‌ ತಾಲ್ಲೂಕಿನ 11, ಶ್ರೀನಿವಾಸಪುರ ತಾಲ್ಲೂಕಿನ 26 ಮಂದಿ ಹಾಗೂ ಬಂಗಾರಪೇಟೆ ತಾಲ್ಲೂಕಿನ ಇಬ್ಬರನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.