ADVERTISEMENT

ಕೊಳವೆಬಾವಿ ದುರಸ್ತಿಗೆ ಹಿಂದೇಟು: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 3:41 IST
Last Updated 23 ಜುಲೈ 2021, 3:41 IST
ಕೊಳವೆಬಾವಿ ಪೈಪ್‍ಗಳು ರಸ್ತೆಯಲ್ಲಿಯೇ ಬಿದ್ದಿರುವುದು
ಕೊಳವೆಬಾವಿ ಪೈಪ್‍ಗಳು ರಸ್ತೆಯಲ್ಲಿಯೇ ಬಿದ್ದಿರುವುದು   

ಬೇತಮಂಗಲ: ಸುಮಾರು 3 ತಿಂಗಳಿಂದ ಕೊಳವೆಬಾವಿ ಕೆಟ್ಟು ಟ್ಯಾಂಕರ್ ನೀರನ್ನು ಅವಲಂಬಿಸಿ ದಿನನಿತ್ಯದ ಕಾರ್ಯ ನಡೆಸುತ್ತಿದ್ದರೂ ದುರಸ್ತಿ ಮಾಡುವ ಕಾರ್ಯಕ್ಕೆ ಗ್ರಾ.ಪಂ ಆಡಳಿತ ಮುಂದಾಗದೆ ನಿರ್ಲಕ್ಷ್ಯ ತೋರಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಮದ ಹಳೇ ಬಡಾವಣೆಯ 5ನೇ ಬ್ಲಾಕ್ ನಿವಾಸಿಗಳು ಕೊಳವೆಬಾವಿ ನೀರು ಇಲ್ಲದೇ ಟ್ಯಾಂಕರ್ ನೀರಿನಿಂದ ಸರಬರಾಜು ಮಾಡುವ ಅಲ್ಪಸ್ವಲ್ಪ ನೀರಿನಲ್ಲಿಯೇ ದಿನನಿತ್ಯದ ಕಾರ್ಯ ಮುಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿರುವ ಕೊಳವೆಬಾವಿಗಳ ದುರಸ್ತಿ, ನಿರ್ವಹಣೆ ಹಾಗೂ ನೀರು ಸರಬರಾಜಿಗಾಗಿ ಗ್ರಾ.ಪಂ.ನಿಂದ ಒಂದು ವರ್ಷದ ಅವಧಿಗೆ ಟೆಂಡರ್ ಮೂಲಕ ಹರಾಜು ನೀಡಲಾಗಿದೆ. ಕೊಳವೆಬಾವಿಯ ಕೇಸಿಂಗ್ ಪೈಪ್ ನಾಶವಾಗಿರುವ ನೆಪದೊಂದಿಗೆ ಹರಾಜು ಪಡೆದಿರುವ ಗುತ್ತಿಗೆದಾರರು ಯಾವುದೇ ಸಂಬಂಧ ಇಲ್ಲದಂತೆ ನಡೆದುಕೊಂಡಿದ್ದಾರೆ. ಗ್ರಾ.ಪಂ. ಅಧಿಕಾರಿಗಳು ಸರಿಪಡಿಸಬೇಕೆಂದು ತಿಳಿಸಿ ಕೈತೊಳೆದುಕೊಳ್ಳುತ್ತಾರೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ಗ್ರಾ.ಪಂ. ಅಧಿಕಾರಿಗಳನ್ನು ಕೇಳಿದರೆ ಕೊಳವೆಬಾವಿಗಳ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ ಎಂಬ ಉತ್ತರ ನೀಡುತ್ತಾರೆ. ಕೊಳವೆಬಾವಿಯಿಂದ ನೀರು ಸರಬರಾಜು ಆಗದೆ ಬ್ಲಾಕ್ ನಿವಾಸಿಗಳು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ.

ಶೀಘ್ರವೇ ಗ್ರಾ.ಪಂ. ಅಧಿಕಾರಿಗಳು ಕೊಳವೆಬಾವಿ ಸರಿಪಡಿಸಲು ಮುಂದಾ ಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.