ADVERTISEMENT

ಶಿಳ್ಳಂಗೆರೆಗೆ ಬಂದ ಪಾದರಾಯನಪುರ ಮಂದಿ: ಗ್ರಾಮಸ್ಥರಲ್ಲಿ ಆತಂಕ

ಕೊರೊನಾ ಸೋಂಕಿನ ಹಾಟ್‌ಸ್ಪಾಟ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:33 IST
Last Updated 21 ಏಪ್ರಿಲ್ 2020, 13:33 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ಕೊರೊನಾ ಸೋಂಕಿನ ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವ ಬೆಂಗಳೂರಿನ ಪಾದರಾಯನಪುರದಿಂದ 5 ಮಂದಿ ಸೋಮವಾರ ರಾತ್ರೋರಾತ್ರಿ ತಾಲ್ಲೂಕಿನ ಶಿಳ್ಳಂಗೆರೆ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮೂಲತಃ ಶಿಳ್ಳಂಗೆರೆ ಗ್ರಾಮದ ವ್ಯಕ್ತಿಯು ಪತ್ನಿ, ಮಗು ಹಾಗೂ ಅತ್ತೆ ಮಾವನ ಜತೆ ಪಾದರಾಯನಪುರದಲ್ಲಿ ವಾಸವಾಗಿದ್ದರು. ಪಾದರಾಯನಪುರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಹಾಗೂ ಆ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯಿಂದ ಭಯಭೀತಗೊಂಡ ಈ ಕುಟುಂಬವು ಸರಕು ಸಾಗಣೆ ವಾಹನದಲ್ಲಿ ರಾತ್ರಿ ಕದ್ದುಮುಚ್ಚಿ ಶಿಳ್ಳಂಗೆರೆಗೆ ಬಂದಿದೆ.

ಈ ಸುದ್ದಿ ತಿಳಿದ ಸ್ಥಳೀಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ರಾತ್ರಿಯೇ ಗ್ರಾಮಕ್ಕೆ ಹೋಗಿ ಪಾದರಾಯನಪುರದಿಂದ ಬಂದಿದ್ದ 5 ಮಂದಿ ಮತ್ತು ಅವರು ಉಳಿದುಕೊಂಡಿದ್ದ ಮನೆಯ 4 ಮಂದಿಯನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಿದ್ದಾರೆ.

ADVERTISEMENT

ಇದರಿಂದ ಆಕ್ರೋಶಗೊಂಡ ಕುಟುಂಬವು ಮನೆಯ ಚೀಲಕ ಮುರಿದು ಹೊರಬಂದು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದೆ. ಹೀಗಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಹೆಚ್ಚಿನ ಪೊಲೀಸ್‌ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿ ಇಡೀ ಕುಟುಂಬವನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಿಸಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ನಿರ್ಲಕ್ಷ್ಯ: ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯಾದ್ಯಂತ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆಯೂ ಪಾದರಾಯನಪುರದ 5 ಮಂದಿ ಚೆಕ್‌ಪೋಸ್ಟ್‌ ಸಿಬ್ಬಂದಿಯ ಕಣ್ತಪ್ಪಿಸಿ ಜಿಲ್ಲೆಯನ್ನು ಪ್ರವೇಶಿಸಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ 5 ಮಂದಿ ತರಕಾರಿ ಸಾಗಣೆ ವಾಹನದಲ್ಲಿ ಕುಳಿತು ರಾಷ್ಟ್ರೀಯ ಹೆದ್ದಾರಿ 75ರ ರಾಮಸಂದ್ರ ಚೆಕ್‌ಪೋಸ್ಟ್‌ ಅಥವಾ ಮಾಲೂರು ತಾಲ್ಲೂಕು ಗಡಿ ಭಾಗದ ತೊರ್ನಹಳ್ಳಿ ಚೆಕ್‌ಪೋಸ್ಟ್‌ ಮೂಲಕ ಜಿಲ್ಲೆಗೆ ಬಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಕಾವಲಿಗೆ ನಿಯೋಜನೆಗೊಂಡಿದ್ದ ಪೊಲೀಸರು ವಾಹನ ತಪಾಸಣೆ ಮಾಡದೆ ಜಿಲ್ಲೆಯನ್ನು ಪ್ರವೇಶಿಸಲು ಬಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ರಕ್ತ ಮಾದರಿ ರವಾನೆ: ಕುಟುಂಬದ 9 ಮಂದಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕುಟುಂಬ ಸದಸ್ಯರ ಚಲನವಲನದ ಮೇಲೆ ನಿಗಾ ಇಡಲು ಪೊಲೀಸ್‌ ಹಾಗೂ ಆಶಾ ಕಾರ್ಯಕರ್ತೆಯರನ್ನು ಮನೆಯ ಬಳಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.