ADVERTISEMENT

ಪೊಲೀಸರಿಗೆ ದೈಹಿಕ ಸಮತೋಲನ ಅಗತ್ಯ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಐ.ಎಫ್.ಬಿದರಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:41 IST
Last Updated 21 ಜನವರಿ 2020, 10:41 IST
ಕೋಲಾರದಲ್ಲಿ ಸೋಮವಾರ ಆರಂಭವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡರು.
ಕೋಲಾರದಲ್ಲಿ ಸೋಮವಾರ ಆರಂಭವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡರು.   

ಕೋಲಾರ: ‘ದೇಶದ ಹಿರಿಮೆ ಹೆಚ್ಚಿಸಲು ಕ್ರೀಡೆ ಸಹಕಾರಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಐ.ಎಫ್.ಬಿದರಿ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ‘ಪೊಲೀಸ್‌ ಸಿಬ್ಬಂದಿಯು ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಪೊಲೀಸರು ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ’ ಎಂದು ಕಿವಿಮಾತು ಹೇಳಿದರು.

‘ಪೊಲೀಸರಿಗೆ ದೈಹಿಕ ಸಮತೋಲನ ಅತ್ಯಗತ್ಯ. ವಯಸ್ಸಾದಂತೆ ಒತ್ತಡದ ಕಾರಣಕ್ಕೆ ನಾನಾ ಕಾಯಿಲೆ ಬರುತ್ತವೆ. ತರಬೇತಿ ಹಂತ ಮುಗಿಸಿದ ನಂತರ ಸಾಕಷ್ಟು ಮಂದಿ ವ್ಯಾಯಾಮ ಬಿಡುತ್ತಾರೆ. ಇದು ರಕ್ತದೊತ್ತಡ, ಮಧುಮೇಹಕ್ಕೆ ಆಸ್ಪದ ನೀಡುತ್ತದೆ. ಆದ್ದರಿಂದ ನಿತ್ಯ ವ್ಯಾಯಾಮ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪೊಲೀಸರ ಕರ್ತವ್ಯಕ್ಕೆ ನಿಗದಿತ ಸಮಯ ಇರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಾರ್ಯ ಒತ್ತಡದ ನಡುವೆ ಆರೋಗ್ಯದ ಗಮನ ಹರಿಸುವುದು. ಕ್ರೀಡೆಗಳು ಸಂಘಟನಾ ಶಕ್ತಿ ಹಾಗೂ ಒಗ್ಗಟ್ಟಿನ ಗುಣ ಬೆಳೆಸುತ್ತವೆ. ಪೊಲೀಸರು ಪ್ರತಿನಿತ್ಯ ಕಾರ್ಯ ಒತ್ತಡದಲ್ಲಿ ಬಳಲುತ್ತಿರುತ್ತಾರೆ’ ಎಂದರು.

ಒತ್ತಡ ನಿವಾರಣೆ: ‘ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಉತ್ತಮ ಆರೋಗ್ಯದ ಜತೆಗೆ ಹೆಚ್ಚು ಕ್ರಿಯಾಶೀಲರಾಗಿರುವುದಕ್ಕೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

‘ಪೊಲೀಸ್ ಇಲಾಖೆಯು ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸತತ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತದೆ. ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಒತ್ತಡದ ಕೆಲಸಗಳ ನಡುವೆಯೂ ಕ್ರೀಡೆ ಹಾಗೂ ದೈಹಿಕ ವ್ಯಾಯಾಮಗಳಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್ಪಿಗಳಾದ ಚೌಡಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.