ADVERTISEMENT

ಅಧ್ಯಕ್ಷರ ವಿಡಿಯೊ ವೈರಲ್‌: ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:39 IST
Last Updated 23 ನವೆಂಬರ್ 2020, 4:39 IST
ವಳ್ಳಲ್‌ ಮುನಿಸ್ವಾಮಿ
ವಳ್ಳಲ್‌ ಮುನಿಸ್ವಾಮಿ   

ಕೆಜಿಎಫ್‌: ಶಾಸಕಿ ರೂಪಕಲಾ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿರುವ ವಿಡಿಯೊವನ್ನು ದುಷ್ಕರ್ಮಿಗಳು ವೈರಲ್‌ ಮಾಡಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಹೇಳಿದ್ದಾರೆ.

ರೂಪಕಲಾ ಅವರು ಬ್ಯಾಂಕ್ ಲೋನ್‌ ಕೊಟ್ಟು ಜನರನ್ನು ವಂಚಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಮಾತನಾಡಿರುವ ವಿಡಿಯೊವನ್ನು ದುಷ್ಕರ್ಮಿಗಳು ತಿರುಚಿ ವೈರಲ್‌ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಒಂದೂವರೆ ವರ್ಷ ಆಯಿತು. ಅಂದಿನಿಂದಲೂ ಶಾಸಕಿ ನನ್ನ ನಾಯಕರು. ಅವರ ಕನಸಿನ ನಗರಸಭೆ ರೂಪಿಸಲು ನನ್ನನ್ನು ನೇಮಿಸಿದ್ದಾರೆ. ತಿಂದ ಮನೆಗೆ ಕನ್ನ ಬಗೆಯುವ ವ್ಯಕ್ತಿ ನಾನಲ್ಲ. ಈ ರೀತಿಯ ಕೀಳು ಅಭಿರುಚಿಯಿಂದ ಕೂಡಿದ ವಿಡಿಯೊವನ್ನು ವೈರಲ್ ಮಾಡಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

‘ನನ್ನ ಬೆಳವಣಿಗೆ ಸಹಿಸದ ಕೆಲವು ವ್ಯಕ್ತಿಗಳು ದುರುದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ. ನಗರಸಭೆಯಲ್ಲಿ ಇದ್ದ ಅವ್ಯವಸ್ಥೆ ಹೋಗಲಾಡಿಸಿ, ಜನಸ್ನೇಹಿಯಾಗಿ ಮಾಡಲು ಯತ್ನಿಸುತ್ತಿದ್ದೇನೆ. ನಗರಸಭೆಯಲ್ಲಿ ಠಿಕಾಣಿ ಹೂಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೆದರಿಸುತ್ತ ಕೆಲಸ ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಇದರಿಂದ ತೊಂದರೆಯಾಗಿದೆ. ಅಂತಹವರು ಈ ಕೆಲಸ ಮಾಡಿರಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ನನ್ನ ಧ್ವನಿ ಬದಲಾವಣೆ ಮಾಡಿ, ಜನರಲ್ಲಿ ಗೊಂದಲ ಉಂಟು ಮಾಡಿರುವವರು ವೈಯಕ್ತಿಕವಾಗಿ ಖುಷಿಪಡಬಹುದು. ಇಂತಹ ಘಟನೆಗಳು ಮರುಕಳಿಸಬಾರದು. ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಿದ ನಂತರ ಅವರ ವಿರುದ್ಧ ₹ 1 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುನಿಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.