ADVERTISEMENT

ಕಠಾರಿಪಾಳ್ಯ: ನೈರ್ಮಲ್ಯದ್ದೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:46 IST
Last Updated 6 ಜನವರಿ 2022, 3:46 IST
ಕಠಾರಿಪಾಳ್ಯ ಬಡಾವಣೆ ಮುಖ್ಯರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ಕಸ
ಕಠಾರಿಪಾಳ್ಯ ಬಡಾವಣೆ ಮುಖ್ಯರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ಕಸ   

ಕಠಾರಿಪಾಳ್ಯ: ನೈರ್ಮಲ್ಯದ್ದೇ ಸಮಸ್ಯೆ

ಕೋಲಾರದ ಕಠಾರಿಪಾಳ್ಯ ಮುಖ್ಯರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕಠಾರಿಪಾಳ್ಯ ಬಡಾವಣೆಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದ್ದು, ಸ್ಥಳೀಯರು ಕಂಡಕಂಡಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚಿದೆ.

ಪೌರಕಾರ್ಮಿಕರು ನಿಯಮಿತವಾಗಿ ಮನೆ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ, ಸ್ಥಳೀಯರು ರಸ್ತೆ ಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ. ಇದರ ತೆರವಿಗೆ ಪೌರಕಾರ್ಮಿಕರು ಕ್ರಮ ಕೈಗೊಂಡಿಲ್ಲ. ಕಸದ ರಾಶಿ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಬಡಾವಣೆ ಕೊಳೆಗೇರಿಯಂತಾಗಿದೆ.

ADVERTISEMENT

ಕಸವು ರಸ್ತೆಗೆ ಹರಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕಸದ ರಾಶಿ ಬಳಿ ಬೀದಿ ನಾಯಿ, ನೊಣ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ಬಡಾವಣೆಯ ಹಲವರು ಈಗಾಗಲೇ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಕಸ ತೆರವುಗೊಳಿಸುವಂತೆ ವಾರ್ಡ್‌ನ ಸದಸ್ಯರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಸದಸ್ಯರು ಸೌಜನ್ಯಕ್ಕೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ.

ಕೃಷ್ಣಮೂರ್ತಿ, ನವಾಜ್‌ ಪಾಷಾ, ಕಠಾರಿಪಾಳ್ಯ.

ಚರಂಡಿ ಸ್ವಚ್ಛತೆಗೆ ನಿರ್ಲಕ್ಷ್ಯ

ಮಾಲೂರು ಪಟ್ಟಣದ ಒಂದನೇ ವಾರ್ಡ್‌ನ ವಿನಾಯಕ ದೇವಾಲಯದ ಬಳಿಯ ಚರಂಡಿಗಳಲ್ಲಿ ಸ್ವಚ್ಛತೆ ಮಾಡದೆ ಕೊಳೆ ನೀರು ನಿಂತಿರುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಈ ಭಾಗದ ನಾಗರಿಕರು ತೊಂದರೆಪಡುತ್ತಿದ್ದಾರೆ.

ಪುರಸಭೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತಿಂಗಳು ಕಳೆದರೂ ಚರಂಡಿ ಸ್ವಚ್ಛತೆ ಮಾಡಿಲ್ಲ. ಇದರಿಂದ ಕಸಕಡ್ಡಿ ತುಂಬಿಕೊಂಡು ಚರಂಡಿಯಲ್ಲಿ ಕೊಳಚೆ ನೀರು ಹರಿಯದೆ ಇರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಸಂಜೆಯಾಗುವ ವೇಳೆಗೆ ಮನೆ ಬಾಗಿಲು ಮುಚ್ಚಿ ಜೀವನ ಸಾಗಿಸಬೇಕಿದೆ. ಮಕ್ಕಳನ್ನು ಸಹ ಸಂಜೆ ವೇಳೆಯಲ್ಲಿ ಹೊರಗೆ ಆಟಕ್ಕೆ ಕಳುಹಿಸಲು ಪೋಷಕರು ಹಿಂಜರಿಯವ ಪರಸ್ಥಿತಿ ನಿರ್ಮಾಣವಾಗಿದೆ. ಪುರಸಭೆಯು ಕೂಡಲೇ ಚರಂಡಿಗಳನ್ನು ಸ್ವಚ್ಛತೆಗೊಳಿಸುವ ಮೂಲಕ ನಾಗರಿಕರ ಆತಂಕವನ್ನು ದೂರ ಮಾಡಬೇಕು.

ಹನೀಫ್‌, ಒಂದನೇ ವಾರ್ಡ್‌ ನಿವಾಸಿ.

ವಿದ್ಯುತ್‌ ತಂತಿ ಅವಾಂತರ

ಕೆಜಿಎಫ್‌ ತಾಲ್ಲೂಕಿನ ಸುಂದರಪಾಳ್ಯ ಗ್ರಾಮ ಪಂಚಾಯಿತಿಗೆ ಸೇರಿದ ತಲ್ಲಪಲ್ಲಿ ಗ್ರಾಮದಲ್ಲಿ ಹೈಟೆನ್ಷನ್ ತಂತಿಗಳು ಬಾಗಿವೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ.

ಗ್ರಾಮದ ಶಾಲೆಯ ಪಕ್ಕದಲ್ಲಿಯೇ ತಂತಿಗಳು ಹಾದು ಹೋಗಿವೆ. ನೆಲದಿಂದ ಕೇವಲ ಆರೇಳು ಅಡಿ ಕೆಳಗೆ ಇವೆ.

ಅಕಸ್ಮಾತ್ ಮಕ್ಕಳು ಆಟ ಆಡುವಾಗ ತಾಗಿಸಿಕೊಂಡರೆ, ಇಲ್ಲವೇ ರೈತರು ಕೃಷಿ ಪರಿಕರಗಳನ್ನು ತೆಗೆದುಕೊಂಡು ಬರುವಾಗ ತಂತಿ ಮುಟ್ಟಿದರೆ ಅನಾಹುತವಾಗುತ್ತದೆ. ಗ್ರಾಮಕ್ಕೆ ಬರುವ ಲೈನ್‌ಮನ್‌ಗೆ ಈಗಾಗಲೇ ಹಲವಾರು ಬಾರಿ ವಿಷಯ ತಿಳಿಸಲಾಗಿದೆ. ಆದರೂ, ಕ್ರಮ ಜರುಗಿಸಿಲ್ಲ. ಕೂಡಲೇ ಬೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕು.

ರವಿ, ತಲ್ಲಪಲ್ಲಿ.

ಕೊಳಚೆ ನೀರು ತೆರವುಗೊಳಿಸಲು ಮನವಿ

ಮಾಲೂರು ಪಟ್ಟಣದ ಮಾಲೂರು-ರಾಜೀವ್ ನಗರ ರಸ್ತೆಯ ಆರಂಭದಲ್ಲೇ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಹೆಪ್ಪುಗಟ್ಟಿದೆ.ಸೊಳ್ಳೆ ಕಾಟ ಹಾಗೂ ದುರ್ವಾಸನೆಯಿಂದ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ.

ಪಟ್ಟಣದಿಂದ ರಾಜೀವ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಹರಿಯಲು ಸ್ಥಳವಿಲ್ಲದೆ ರಸ್ತೆಬದಿ ನಿಂತಿದೆ. ಇದರಿಂದ ದಾರಿಹೋಕರು ಹಾಗೂ ದ್ವಿಚಕ್ರವಾಹನ ಸವಾರರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಚರಂಡಿ ಸೌಕರ್ಯ ಕಲ್ಪಿಸಿ ದುರ್ವಾಸನೆಯಿಂದ ಮುಕ್ತಿ ನೀಡಬೇಕು.

ಅಹಮದ್, ರಾಜೀವ್ ನಗರ,ಮಾಲೂರು.

ಅಪಾಯಕ್ಕೆ ಆಹ್ವಾನ

ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಮುಂಭಾಗದ ಚನ್ನಮ್ಮ ವೃತ್ತದ ಬಳಿಯ ಒಳಚರಂಡಿ ಮೇಲಿನ ಚಪ್ಪಡಿ ಕಲ್ಲು ತೆರವುಗೊಳಿಸಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ನಗರಸಭೆ ಪೌರಕಾರ್ಮಿಕರು ಒಳಚರಂಡಿ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಚಪ್ಪಡಿ ತೆರವು ಮಾಡಿದ್ದರು. ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರ ಪೌರಕಾರ್ಮಿಕರು ಚರಂಡಿಗೆ ಚಪ್ಪಡಿ ಮುಚ್ಚಿಲ್ಲ.

ಪ್ರಮುಖ ವಾಣಿಜ್ಯ ಸ್ಥಳವಾದ ಈ ಭಾಗದಲ್ಲಿ ಜನರ ಓಡಾಟ ಹಾಗೂ ವಾಹನ ಸಂಚಾರ ಹೆಚ್ಚಿದ್ದು, ಅನಾಹುತ ಸಂಭವಿಸುವ
ಸಾಧ್ಯತೆಯಿದೆ.

ಚರಂಡಿಯ ಚಪ್ಪಡಿ ತೆರವುಗೊಳಿಸಿರುವ ಸಂಬಂಧ ಸ್ಥಳದಲ್ಲಿ ಸೂಚನಾ ಫಲಕ ಸಹ ಅಳವಡಿಸಿಲ್ಲ. ಈ ಭಾಗದಲ್ಲಿ ಬೀದಿದೀಪಗಳು ಕೆಟ್ಟಿದ್ದು, ರಾತ್ರಿ ವೇಳೆ ಚರಂಡಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಈಗಾಗಲೇ, ಹಲವರು ಚರಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವುದಕ್ಕೂ ಮುನ್ನ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಒಳಚರಂಡಿಗೆ ಚಪ್ಪಡಿ ಮುಚ್ಚಿಸಬೇಕು.

ಸುಬ್ಬರಾಯಪ್ಪ, ನಾಗರಾಜ್‌, ಕೋಲಾರ
ನಗರವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.