ADVERTISEMENT

ಭಾಷಾಭಿವೃದ್ಧಿಯಲ್ಲಿ ಕಲಾವಿದರ ಪಾತ್ರ ಹಿರಿದು: ಟಿ.ಎಸ್.ಮಾಯಾ ಬಾಲಚಂದ್ರ

ಸಂಗೀತ ಕಲಾವಿದೆ ಟಿ.ಎಸ್.ಮಾಯಾ ಬಾಲಚಂದ್ರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 1:40 IST
Last Updated 8 ಫೆಬ್ರುವರಿ 2021, 1:40 IST
ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಗೀತ ಕಲಾವಿದೆ ಟಿ.ಎಸ್.ಮಾಯಾ ಬಾಲಚಂದ್ರ ಅವರನ್ನು ಸನ್ಮಾನಿಸಲಾಯಿತು
ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಗೀತ ಕಲಾವಿದೆ ಟಿ.ಎಸ್.ಮಾಯಾ ಬಾಲಚಂದ್ರ ಅವರನ್ನು ಸನ್ಮಾನಿಸಲಾಯಿತು   

ಶ್ರೀನಿವಾಸಪುರ: ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಸಂಗೀತ ಕಲಾವಿದರ ಪಾತ್ರ ಹಿರಿದು. ಸಂಗೀತ ಕಲಾವಿದರ ಸಿರಿ ಕಂಠದಿಂದ ಗಾನ ಗಂಗೆಯಾಗಿ ಹರಿಯುತ್ತಿರುವ ಕಾವ್ಯ ಕೃತಿಗಳು ಸಂಗೀತ ಪ್ರೇಮಿಗಳ ಮನದಾಳದಲ್ಲಿ ಉಳಿದಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್ ಹೇಳಿದರು.

ಪಟ್ಟಣದ ಯೋಗ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಗೀತ ಕಲಾವಿದೆ ಟಿ.ಎಸ್.ಮಾಯಾ ಬಾಲಚಂದ್ರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಮಾವಿನ ಪಟ್ಟಣದಲ್ಲಿ ಸಂಗೀತ ಶಾಲೆ ತೆರೆದು, ಗಡಿ ಭಾಗದ ಸಂಗೀತಾಸಕ್ತರಿಗೆ ಸಂಗೀತ ಹೇಳಿಕೊಡುವಲ್ಲಿ ಮಾಯಾ ಬಾಲಚಂದ್ರ ಶ್ರಮಿಸುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ADVERTISEMENT

ವಿವಿಧ ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಪರಿಸರ ಪ್ರೇಮಿಯೂ ಆಗಿದ್ದಾರೆ. ಆದ್ದರಿಂದಲೇ ಸ್ಥಳೀಯ ಪುರಸಭೆ ಅವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಮನೆಯಲ್ಲಿನ ಹಸಿ ಕಸ ಬಳಸಿ ಸಾವಯವ ಗೊಬ್ಬರ ತಯಾರಿಸುವ ತರಬೇತಿ ನೀಡುತ್ತಿದ್ದಾರೆ. ಮಾಳಿಗೆ ತೋಟ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಇವರು ಕನ್ನಡ ಭಾಷಾ ಬೆಳವಣಿಗೆ, ಸಂಗೀತ ಹಾಗೂ ಪರಿಸರ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಯನ್ನು ಗಮನಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಗಿದೆ. ಸಾಧಕರನ್ನು ಗೌರವಿಸುವ ಸಂಪ್ರದಾಯ ಕನ್ನಡ ಸಾಹಿತ್ಯ ಪರಿಷತ್ತಿನದಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿಗೆ ಶ್ರಮಿಸಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ. ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗಿದೆ. ಮಾಯಾ ಬಾಲಚಂದ್ರ ಪಟ್ಟಣದಲ್ಲಿ ಸಂಗೀತ ಸುಧೆ ಹರಿಸುತ್ತಿದ್ದಾರೆ. ಅವರ ಸಂಗಡಿಗರ ಸೇವೆಯೂ ಗಮನಾರ್ಹವಾದುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ವೆಂಕಟಸ್ವಾಮಿ, ಶಿವಕುಮಾರ್, ಡಾ. ವೈ.ವಿ.ವೆಂಕಟಾಚಲ, ವಾಸವಿ ರವಿಕುಮಾರ್, ಪಿ.ಎಸ್.ಮಂಜುಳಾ, ವೆಂ.ರವಿಕುಮಾರ್, ಕೆ.ಎಂ.ಚೌಡಪ್ಪ, ಕಲಾ ಶಂಕರ್, ನಟರಾಜ್, ಶಾರದ ಕೃಷ್ಣಮೂರ್ತಿ, ಬಾಬು, ವಾಜೀದ್, ಎನ್.ಎಸ್.ಮೂರ್ತಿ, ಎಸ್.ಕೆ.ಲಕ್ಷಣಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.