ADVERTISEMENT

ಕೋಲಾರ: ಶತಕದ ಗಡಿ ದಾಟಿದ ಸೋಂಕಿತರ ದ್ವಿತೀಯ ಸಂಪರ್ಕಿತರು

ಎಸ್‌ಎನ್ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ 124 ಮಂದಿ ಕ್ವಾರಂಟೈನ್‌

​ಪ್ರಜಾವಾಣಿ ವಾರ್ತೆ
Published 13 ಮೇ 2020, 15:29 IST
Last Updated 13 ಮೇ 2020, 15:29 IST
ಕೊರೊನಾ ವೈರಸ್
ಕೊರೊನಾ ವೈರಸ್   

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಜತೆಗಿನ ದ್ವಿತೀಯ ಸಂಪರ್ಕಿತರ ಸಂಖ್ಯೆ ಶತಕದ ಗಡಿ ದಾಟಿದ್ದು, ಆರೋಗ್ಯ ಇಲಾಖೆಯು ಅವರೆಲ್ಲರನ್ನೂ ಎಸ್‌್ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಿದೆ.

ಮುಳಬಾಗಿಲು ತಾಲ್ಲೂಕಿನ ವಿ.ಹೊಸಹಳ್ಳಿ, ಬೈರಸಂದ್ರ, ಬೆಳಗಾನಹಳ್ಳಿ ಹಾಗೂ ಮುಳಬಾಗಿಲು ನಗರದ ಬೂಸಲಕುಂಟೆ ಬಡಾವಣೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸುಮಾರು 100 ಮಂದಿಯನ್ನು ಬುಧವಾರ ಪತ್ತೆ ಮಾಡಲಾಗಿದೆ. ಗುರುವಾರದ ವೇಳೆಗೆ ದ್ವಿತೀಯ ಸಂಪರ್ಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

5 ಮಂದಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಜತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 24 ಮಂದಿಯನ್ನು ರಾತ್ರಿಯೇ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಕರೆತಂದು ಕ್ವಾರಂಟೈನ್‌ ಮಾಡಲಾಗಿತ್ತು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಸೇರಿದಂತೆ ಒಟ್ಟಾರೆ 124 ಮಂದಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬುಧವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ADVERTISEMENT

ಮುಳಬಾಗಿಲು ತಾಲ್ಲೂಕಿನ ಬೈರಸಂದ್ರ ಮತ್ತು ಬೆಳಗಾನಹಳ್ಳಿ ಗ್ರಾಮದ ಸೋಂಕಿತರು ಲಾರಿ ಚಾಲಕರಾಗಿದ್ದು, ಈ 3 ಮಂದಿ ವಡ್ಡಹಳ್ಳಿ ಹಾಗೂ ಕೋಲಾರ ಎಪಿಎಂಸಿಯಲ್ಲಿ ಓಡಾಡಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಈ ಎರಡೂ ಎಪಿಎಂಸಿಗಳಲ್ಲಿ ಸಾಕಷ್ಟು ಮಂಡಿ ಮಾಲೀಕರು, ತರಕಾರಿ ವ್ಯಾಪಾರಿಗಳು ಹಾಗೂ ಲಾರಿ ಚಾಲಕರು ಈ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಸೋಂಕು: ಮುಳಬಾಗಿಲು ತಾಲ್ಲೂಕಿನ ವಿ.ಹೊಸಹಳ್ಳಿಯ ಸೋಂಕಿತೆಯು ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರು ಶೈಕ್ಷಣಿಕ ಉದ್ದೇಶಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದಾಗ ಕೊರೊನಾ ಸೋಂಕು ತಗುಲಿರುವುದು ಆರೋಗ್ಯ ಇಲಾಖೆ ಪರಿಶೀಲನೆಯಿಂದ ಗೊತ್ತಾಗಿದೆ.

ಮುಳಬಾಗಿಲು ನಗರದ ಬೂಸಲಕುಂಟೆ ಬಡಾವಣೆಯಲ್ಲಿನ ಸೋಂಕಿತ ವೃದ್ಧೆಯು ಬೆಂಗಳೂರಿನ ಜೆ.ಪಿ ನಗರ ನಿವಾಸಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅಲ್ಲಿಯೇ ಸೋಂಕು ತಗುಲಿರುವುದು ಪರಿಶೀಲನೆಯಿಂದ ತಿಳಿದುಬಂದಿದೆ. ಹೊಸಹಳ್ಳಿ ಮತ್ತು ಬೂಸಲಕುಂಟೆಯ ಸೋಂಕಿತರ ಪ್ರವಾಸದ ವಿವರ ಆಧರಿಸಿ ಅವರ ಜತೆ ಸಂಪರ್ಕಕ್ಕೆ ಬಂದಿರುವ ಮತ್ತಷ್ಟು ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಹುಡುಕಾಟ ನಡೆಸಿದೆ.

ಆಂಧ್ರಪ್ರದೇಶದ ವಿ.ಕೋಟದ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣಕ್ಕೆ ಕೋಲಾರ ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕ್ವಾರಂಟೈನ್‌ ಮಾಡಲಾಗಿರುವ ಸುಮಾರು 65 ಮಂದಿಯ ವೈದ್ಯಕೀಯ ವರದಿ ಬಂದಿದ್ದು, ಅವರಿಗೆ ಸೋಂಕು ಇಲ್ಲವೆಂದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.