ADVERTISEMENT

'ಸಂಘದಲ್ಲಿ ರಾಜಕಾರಣ ನುಸುಳಬಾರದು'

ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್‌ಬಾಬು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:39 IST
Last Updated 18 ಡಿಸೆಂಬರ್ 2020, 16:39 IST
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ಸುರೇಶ್‌ಬಾಬು ಮಾತನಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ಸುರೇಶ್‌ಬಾಬು ಮಾತನಾಡಿದರು.   

ಕೋಲಾರ: ‘ನೌಕರರ ಸಂಘದೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜತೆಗೂಡಿ ನಡೆದರೆ ಮಾತ್ರ ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ಸುರೇಶ್‌ಬಾಬು ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಸರ್ವಸಮ್ಮತ, ರಚನಾತ್ಮಕ ಕೆಲಸ ಮಾಡುವ ಕ್ರಿಯಾಶೀಲ ಮುಖಂಡರನ್ನು ಜಿಲ್ಲೆ ಮತ್ತು ತಾಲ್ಲೂಕು ಘಟಕಕ್ಕೆ ಆಯ್ಕೆ ಮಾಡಲು ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಿ. ಸಂಘದಲ್ಲಿ ಜಾತಿ, ಧರ್ಮ, ರಾಜಕಾರಣ ನುಸುಳದಂತೆ ಎಚ್ಚರ ವಹಿಸಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಸರ್ಕಾರದ ಜತೆ ಸುಮಧುರ ಸಂಬಂಧ ಹೊಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ನಿಲುವಿಗೆ ನಾವು ಕೈಜೋಡಿಸಬೇಕು.`ಬನ್ನಿ ಶಿಕ್ಷಕರೇ ವಿಕಾಸ ಶೀಲ ಹೆಜ್ಜೆಗಳೊಂದಿಗೆ ಹೊಸ ಮನ್ವಂತರಕ್ಕೆ ಸಾಗೋಣ ಎಂಬ ಕರೆಗೆ ಜಿಲ್ಲೆಯ ಶಿಕ್ಷಕ ಪ್ರತಿನಿಧಿಗಳು ಕೈಜೋಡಿಸಬೇಕು. ಜಿಲ್ಲಾ, ತಾಲ್ಲೂಕು ಘಟಕಕ್ಕೆ ಒಮ್ಮತದ ಪದಾಧಿಕಾರಿಗಳ ಆಯ್ಕೆಗೆ ಸಹಕರಿಸಿ’ ಎಂದು ಮನವಿ ಮಾಡಿದರು.

‘ನಮ್ಮದು ನೌಕರರ ಜಾತಿ, ನಾವೆಲ್ಲರೂ ಒಂದೇ. ಸಮಸ್ಯೆಗಳು ಸಹ ಒಂದೇ ಆಗಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಶಿಕ್ಷಕರಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಾರೇ ಅಧ್ಯಕ್ಷರಾದರೂ ನೌಕರರ ಸಂಘದಡಿ ಒಂದಾಗಿ ಸಾಗೋಣ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸಲಹೆ ನೀಡಿದರು.

ಸಮಸ್ಯೆ ಸಾಕಷ್ಟಿವೆ: ‘ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ಅವುಗಳ ಪರಿಹಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಮರ್ಥರಿದ್ದಾರೆ. ಅವರು ಸರ್ಕಾರದೊಂದಿಗೆ ಸಮನ್ವಯ ಕಾಯ್ದುಕೊಂಡು ಸಮಸ್ಯೆ ಪರಿಹರಿಸುವ ಶಕ್ತಿ ಹೊಂದಿದ್ದಾರೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ಎಸ್.ಚೌಡಪ್ಪ ಅಭಿಪ್ರಾಯಪಟ್ಟರು.

‘ಸರ್ವಸಮ್ಮತ ಆಯ್ಕೆ ಎಲ್ಲರ ಒಲವಾಗಿರಲಿ. ಯಾರೇ ಅಧ್ಯಕ್ಷರಾದರೂ ನೌಕರರ ಸಂಘದಡಿಯೇ ಇರಬೇಕು ಎಂಬ ಸಂಕಲ್ಪ ಮಾಡಿ’ ಎಂದು ಬಂಗಾರಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಪ್ಪೇಗೌಡ ಹೇಳಿದರು.

ಸರ್ವ ಸಮ್ಮತ ಆಯ್ಕೆ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಾಲ್ಲೂಕು ಹಾಗೂ ಜಿಲ್ಲಾ ಘಟಕಕ್ಕೆ ನೌಕರರ ಸಂಘದಡಿ ಪದಾಧಿಕಾರಿಗಳ ಸರ್ವ ಸಮ್ಮತ ಆಯ್ಕೆಗೆ ಒಪ್ಪಿಗೆ ಸೂಚಿಸಿ, ನೌಕರರ ಸಂಘ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದರು.

ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ನಾಗರಾಜ್, ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.