ಕೋಲಾರ: ‘ಹಲವಾರು ಚುನಾವಣೆಗಳಲ್ಲಿ ಟಿಕೆಟ್ ನೀಡುವಲ್ಲಿ ಕೆಆರ್‌ಎಸ್ ಪಕ್ಷವು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಇತರ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರನ್ನು ಗಣ್ಯರಿಗೆ ಪುಷ್ಪಗುಚ್ಚ ನೀಡಲು ಹಾಗೂ ಸಿಂಗರಿಸಿಕೊಂಡು ಬಂದು ವೇದಿಕೆಯಲ್ಲಿ ಅಂದವಾಗಿ ಕಾಣಿಸಿಕೊಳ್ಳಲಷ್ಟೇ ಮಹಿಳೆಯರನ್ನು ಇಟ್ಟುಕೊಂಡಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ ಎಸ್) ಪಕ್ಷದ ಅಧ್ಯಕ್ಷ ರವಿಕೃಷ್ಣರೆಡ್ಡಿ ವಾಗ್ದಾಳಿ ನಡೆಸಿದರು.
ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಅಪ್ಪ ಅಥವಾ ಪತಿ ರಾಜಕೀಯದಲ್ಲಿ ದೊಡ್ಡ ಸಾಧನೆ ಮಾಡಿದ್ದರೆ ಮಾತ್ರ ಅಂಥವರ ಮನೆಯ ಹೆಣ್ಣು ಮಕ್ಕಳಿಗೆ ಟಿಕೆಟ್ ಸಿಗುತ್ತದೆ. ಸ್ವತಂತ್ರವಾಗಿ ಆಲೋಚನೆ ಇರುವ ಹೆಣ್ಣು ಮಕ್ಕಳಿಗೆ ಜೆಸಿಬಿಯಂಥ ಭ್ರಷ್ಟ ಪಕ್ಷಗಳಲ್ಲಿ ಅವಕಾಶ ಅಪರೂಪವಾಗಿದೆ’ ಎಂದು ಟೀಕಾ ಪ್ರಹಾರ ನಡೆಸಿದರು.
‘ಇನ್ನು ಕೆಲ ಮಹಿಳೆಯರು ಮುಂದೆ ಬಂದಿದ್ದಾರೆ. ಹೇಗೆಂದರೆ ಆ ಪಕ್ಷಗಳ ಗಾಡ್ ಫಾದರ್‌ಗಳಿಗೆ ಎಲ್ಲಾ ರೀತಿಯ ಸೇವೆಗಳನ್ನು ಮಾಡಿದರೆ ಆಶೀರ್ವಾದ ಸಿಗುತ್ತದೆ’ ಎಂದು ದೂರಿದರು.
‘ಮಹಿಳೆಯರಿಗೆ ಅವಕಾಶ ಕಲ್ಪಿಸಲು ಸಲುವಾಗಿ ಕೆಆರ್‌ಎಸ್ ಪಕ್ಷದಲ್ಲಿ ಉತ್ತಮ ವಾತಾವರಣ ಕಲ್ಪಿಸಲಾಗುತ್ತಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಮುಂಚೂಣಿಯಲ್ಲಿ ನಿಲ್ಲಿಸಿ ಹೋರಾಟ ನಡೆಸಲು ಹುರಿದುಂಬಿಸಲಾಗುತ್ತಿದೆ. ಯೋಗ್ಯತೆಗೆ ತಕ್ಕಂತೆ ಟಿಕೆಟ್ ನೀಡಲಾಗುವುದು’ ಎಂದು ಹೇಳಿದರು.
‘ಪೊಲೀಸರು ದೌರ್ಜನ್ಯ ತಡೆಯುತ್ತಿಲ್ಲ. ದೂರು ನೀಡಲು ಹೋದ ಯುವತಿ ಮೇಲೆಯೇ ಪೊಲೀಸನೊಬ್ಬ ಅತ್ಯಾಚಾರ ಮಾಡಿದ್ದಾನೆ. ಪೊಲೀಸರು ಯಾರಿಗೂ ರಕ್ಷಣೆ ಕೊಡುತ್ತಿಲ್ಲ. ಮಹಿಳೆಯರು ಬಡಿಗೆ, ಲಾಠಿ ಇಟ್ಟುಕೊಂಡು ಹೊರಬೇಕು’ ಎಂದು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ಮಾತನಾಡಿ, ‘ಹೆಣ್ಣು ಮಕ್ಕಳು ಹೋರಾಟದ ಹಾದಿಯಲ್ಲಿ ಇದ್ದಾರೆ. ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಮಹಿಳೆಯರು ಮನೆಗೆ ಸೀಮಿತ ಆಗಬಾರದು. ಹಲವಾರು ಅವಕಾಶ ಇದ್ದು ಬಳಸಿಕೊಳ್ಳಬೇಕು. ರಾಜಕೀಯದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು. ಸಾಧನೆಯ ಛಲವಿರಲಿ, ಆತ್ಮಸ್ಥೈರ್ಯ ಇರಲಿ' ಎಂದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್ ಮಾತನಾಡಿ, ‘ರಾಜಕಾರಣ ಎಂದರೆ ಕೆಟ್ಟದು ಎಂಬ ಮಾತಿದೆ. ದೌರ್ಜನ್ಯ ಎಲ್ಲಿ ನಡೆಯತ್ತೋ ಅಲ್ಲೇ ನಾವು ಧ್ವನಿ ಎತ್ತಬೇಕಿದೆ. ಈ ಸಮಾಜದಲ್ಲಿ ಯಾರೂ ಯಾರನ್ನೂ ಬೆಳೆಸಲ್ಲ. ನಾವು ಬೆಳೆಯಬೇಕು. ಮಹಿಳೆಯರು ರಾಜಕಾರಣಕ್ಕೆ ಬಂದರೆ ಹಲವಾರು ಬದಲಾವಣೆ ಆಗಲಿದೆ. ಅವಕಾಶ ಸಿಗದ ಕಾರಣ ನಮ್ಮಲ್ಲಿರುವ ಧೈರ್ಯ ಹೊರಬರುತ್ತಿಲ್ಲ ಅಷ್ಟೆ. ರಾಜಕೀಯವಾಗಿ ಬೆಳೆಯಲು ಕೆಆರ್‌ಎಸ್‌ನಲ್ಲಿ ಉತ್ತಮ ಅವಕಾಶ ಸಿಗುತ್ತದೆ’ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೆಳಕು ಸಂಸ್ಥೆಯ ರಾಧಾಮಣಿ, ಲಕ್ಷ್ಮಿ, ಹೇಮಾವತಿ, ರತ್ಮಮ್ಮ, ಮಂಜುಳಾ, ನಿರ್ಮಲಾ, ನಾಗವೇಣಿ, ನಾಗರತ್ನಮ್ಮ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ನಗರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾಲ್ನಡಿಗೆಯಲ್ಲಿ ರಂಗಮಂದಿರಕ್ಕೆ ಬಂದರು.
ಸಂಘಟನಾ ಕಾರ್ಯದರ್ಶಿ ರಂಜಿನಿ, ದೀಪಾ, ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ, ಯುವ ಘಟಕದ ಜನನಿ ವತ್ಸಲಾ, ಶಕುಂತಲಾ, ಪದಾಧಿಕಾರಿಗಳಾದ ಪದ್ಮಾವತಿ, ಲಕ್ಣ್ಮಿ ರವಿ, ಶಿಲ್ಪಾ, ಜಿಲ್ಲಾ ಸಂಘಟಕ ಮಹೇಶ್, ಸಹರಾ ಬಾನು, ವೆಂಕಟರಾಮಯ್ಯ, ಹಾಗೂ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.