ADVERTISEMENT

ವಿಭಜಿಸಿ ಆಳುವ ತಂತ್ರಕ್ಕೆ ಅವಕಾಶ ಬೇಡ: ಸಂಸದ ಎಸ್.ಮುನಿಸ್ವಾಮಿ ಸಲಹೆ

ವಾಲ್ಮೀಕಿ ಜಯಂತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:18 IST
Last Updated 13 ಅಕ್ಟೋಬರ್ 2019, 15:18 IST
ಕೋಲಾರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಕೋಲಾರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.   

ಕೋಲಾರ: ‘ವಾಲ್ಮೀಕಿ ಸಮುದಾಯದವರು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.

ಜಿಲ್ಲಾಡಳಿತದಿಂದ ಇಲ್ಲಿನ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿ, ‘ಸಮುದಾಯವನ್ನು ವಿಭಜಿಸಿ ಆಳುವ ತಂತ್ರಗಾರಿಕೆಗೆ ಅವಕಾಶ ನೀಡದೇ ಜಾಗೃತರಾಗಿ ಒಗ್ಗಾಟಾಗಿದ್ದಾರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ’ ಎಂದರು.

‘ಸಮುದಾಯದಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗವುದು. ಸರ್ಕಾರದ ಸೌಕರ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಸಮಗ್ರ ಅಭಿವೃದ್ದಿ ಕಾಣಲು ಸಾಧ್ಯ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಅವಣಿ ಕ್ಷೇತ್ರದಲ್ಲಿ ವಾಲ್ಮೀಕಿ ಆಶ್ರಮವಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿಸಿದರು. ಜಯಂತಿಗಳ ಆಚರಣೆ ಉದ್ದೇಶ ಅರಿತು ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಸಮುದಾಯದ ನಾಯಕರು ಮಾತ್ರ ಸೌಕರ್ಯಗಳನ್ನು ಕೊಂಡರೆ ಸಾಲದು. ಸಾಮಾನ್ಯ ಜನರಿಗೆ ಸೌಲತ್ತುಗಳನ್ನು ಕೊಡಿಸುವವರು ಯಾರೆಂದು ಪ್ರಶ್ನಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯುವಂತೆ ಕಾರ್ಯಕ್ರಮಗಳು ರೂಪಿಸಬೇಕು. ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಮುಂದಾಗಬೇಕು’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ, ‘ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಸರ್ಕಾರವು ಹಿಂದುಳಿದ ಜನಾಂಗವನ್ನು ಗುರುತಿಸಿ ಸಮಾಜದ ಮುಖ್ಯವಾಹಿತಿಗೆ ತರಲು ಜಯಂತಿಗಳನ್ನು ಸರ್ಕಾರವೇ ಆಚರಿಸುವಂತೆ ಆದೇಶ ಮಾಡಿದೆ’ ಎಂದರು.

‘ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಅನೇಕ ಯೋಜನೆಯನ್ನು ರೂಪಿಸಿದೆ. ಶೈಕ್ಷಣಿಕವಾಗಿ ಮತ್ತು ಅರ್ಥಿಕವಾಗಿ ಅಭಿವೃದ್ದಿ ಹೊಂದಲು ಸಮುದಾಯಕ್ಕೆ ಇರುವ ಯೋಜನೆಗಳ ಅರಿವು ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ವಾಲ್ಮೀಕಿ ರಚಿಸಿದ ರಾಮಯಾಣವು ವಿಶ್ವಕ್ಕೆ ಮಾದರಿಯಾದ ಮಹತ್ವದ ಕೊಡುಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮುದಾಯದವರೆಲ್ಲರೂ ಜಯಂತಿಗಳನ್ನು ಒಂದಾಗಿ ಆಚರಿಸಿದರೆ ಮಾತ್ರ ಅರ್ಥ ಸಿಗುತ್ತದೆ. ಅದರೆ ಮುಖಂಡರುಗಳು ತಮ್ಮ ವೈಯುಕ್ತಿ ಪ್ರತಿಷ್ಠೆಗಳಿಂದಾಗಿ ಕಾರ್ಯಕ್ರಮಗಳಿಗೆ ತೊಂದರೆ ಮಾಡಿದರೆ ಸಮುದಾಯಕ್ಕೆ ಮಾಡಿದ ಅವಮಾನ. ಸರ್ಕಾರ ಸಮುದಾಯದ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಲಹೆ ನೀಡಿದರು.

ಬಹುಜನ ಸಂಘರ್ಷ ಸೇನೆ ಅಧ್ಯಕ್ಷ ಎನ್.ಅಂಬರೀಶ್ ಮಾತನಾಡಿ, ‘ಪ್ರತಿಭಾ ಪುರಸ್ಕಾರ ಮಾಡಬೇಕೆನ್ನುವುದು ಬಹು ದಿನದ ಕನಸಾಗಿತ್ತು ಅದನ್ನು ಈಡೇರಿಸಲಾಗಿದೆ, ಅದೇ ರೀತಿ ಜಯಂತಿಯಲ್ಲಿ ಪಾಲ್ಗೊಂಡಿದ್ದ 48 ಪಲ್ಲಕ್ಕಿಗಳಿಗೂ ನೆನಪಿನ ಕಾಣಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ 4 ಲಕ್ಷ ಮಂದಿ ಸಮುದಾಯದವರಿದ್ದಾರೆ. ಸಮುದಾಯದ ಹೆಸರಿನಲ್ಲಿ ಸುಮಾರು 10 ಸಾವಿರ ನಕಲಿ ಪ್ರಮಾಣ ಪತ್ರ ವಿತರಿಸುವ ಮೂಲಕ ವಂಚನೆಗೆ ಒಳಗಾಗಿದ್ದೇವೆ, ಇಂತಹವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಚಂದ್ರಶೇಖರ್, ಟಿ.ವಿಜಯ್ ಕುಮಾರ್, ರಾಜಪ್ಪ, ಕೃಷ್ಣಪ್ಪ, ನಾಗರಾಜ್, ಬ್ಯಾಟಪ್ಪ ಹಾಜರಿದ್ದರು. ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.