ADVERTISEMENT

₹ 25 ಸಾವಿರ ಕೋಟಿ ತೆರಿಗೆ ಗುರಿ: ಅಬಕಾರಿ ಸಚಿವ ನಾಗೇಶ್ ಹೇಳಿಕೆ

ಕಡಿಮೆ ಬೆಲೆ ಮದ್ಯದಲ್ಲಿ ಹೆಚ್ಚಿನ ಲಾಭ

​ಪ್ರಜಾವಾಣಿ ವಾರ್ತೆ
Published 8 ಮೇ 2020, 14:28 IST
Last Updated 8 ಮೇ 2020, 14:28 IST
ಎಚ್‌.ನಾಗೇಶ್‌
ಎಚ್‌.ನಾಗೇಶ್‌   

ಕೋಲಾರ: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲಾಖೆಯಿಂದ ₹ 25 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿಯಿದೆ’ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮದ್ಯದ ವಹಿವಾಟು ಆರಂಭವಾದ ನಂತರ 2ನೇ ದಿನ ₹ 197 ಕೋಟಿ ಮತ್ತು 3ನೇ ದಿನ ₹ 216 ಕೋಟಿ ತೆರಿಗೆ ಸಂಗ್ರಹವಾಗಿದೆ. ಗುರುವಾರದಿಂದ ಅಬಕಾರಿ ತೆರಿಗೆ ಶೇ 17ರಷ್ಟು ಹೆಚ್ಚಿಸಲಾಗಿದ್ದು, ಕಡಿಮೆ ಬೆಲೆಯ ಮದ್ಯಗಳಲ್ಲಿ ಹೆಚ್ಚಿನ ಲಾಭ ಬರಲಿದೆ’ ಎಂದರು.

‘ತೆರಿಗೆ ಹೆಚ್ಚಳಕ್ಕೂ ಮುನ್ನ ₹ 22,500 ಕೋಟಿ ತೆರಿಗೆ ಸಂಗ್ರಹಣೆ ಗುರಿಯಿತ್ತು. ಇದೀಗ ಶೇ 17ರಷ್ಟು ತೆರಿಗೆ ಹೆಚ್ಚಳ ಆಗಿರುವುದರಿಂದ ₹ 2,500 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಬೇರೆ ಮದ್ಯ ಮಾರಾಟ ಮಳಿಗೆಗಳ ಆರಂಭದ ಬಗ್ಗೆ ಮೇ 17ರ ನಂತರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಅಬಕಾರಿ ಇಲಾಖೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ ವಹಿವಾಟು ಹೆಚ್ಚಾಗಿತ್ತು. ಗ್ರಾಹಕರು ಶಿಸ್ತು ಕಾಪಾಡಿಕೊಂಡು ಮದ್ಯ ಖರೀದಿಸಿದರು. ಹಣ ಇದ್ದವರು ಮದ್ಯ ಕುಡಿಯುತ್ತಿದ್ದಾರೆ. ಇಲ್ಲದವರು ಸುಮ್ಮನಿದ್ದಾರೆ. ಬೇರೆ ರಾಜ್ಯಗಳಲ್ಲೂ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ತೆರಿಗೆ ಪ್ರಮಾಣ ಕಡಿಮೆಯಿದೆ’ ಎಂದು ಮಾಹಿತಿ ನೀಡಿದರು.

15 ಮಂದಿ ವಾಪಸ್‌

‘ಬುಧವಾರ ಹೊರ ಜಿಲ್ಲೆಯಿಂದ 15 ಮಂದಿ ಜಿಲ್ಲೆಗೆ ಬಂದಿದ್ದು, ಅದರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಅವರು ಪೂರ್ವಾನುಮತಿ ಇಲ್ಲದೆ ಜಿಲ್ಲೆಗೆ ಬರಲು ಯತ್ನಿಸಿದ್ದರು. ಜಿಲ್ಲಾಧಿಕಾರಿಯು ಸಾಕಷ್ಟು ಶ್ರಮ ವಹಿಸಿ ದೇವನಹಳ್ಳಿ ತಹಶೀಲ್ದಾರ್‌ ಜತೆ ಮಾತನಾಡಿ 15 ಮಂದಿಯನ್ನೂ ವಾಪಸ್‌ ಕಳುಹಿಸಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ನಂಗಲಿ ಮತ್ತು ರಾಮಸಂದ್ರ ಗಡಿಯದ್ದೇ ದೊಡ್ಡ ಸಮಸ್ಯೆಯಾಗಿದ್ದು, ಅನೇಕರು ಕಾಲುದಾರಿಗಳು ಹಾಗೂ ಜಮೀನುಗಳ ಮಾರ್ಗವಾಗಿ ಜಿಲ್ಲೆಗೆ ನಡೆದುಕೊಂಡು ಬರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ಮುಲಾಜಿಲ್ಲದೆ ವಾಪಸ್‌ ಕಳುಹಿಸಲಾಗುತ್ತಿದೆ’ ಎಂದರು.

‘ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ನಿಗಾ ವಹಿಸಲಾಗುವುದು. ಅನುಮತಿ ಇದ್ದರೆ ಮಾತ್ರ ಬೇರೆ ಜಿಲ್ಲೆಗೆ ಓಡಾಡಲು ಅವಕಾಶವಿದೆ. ಹೊರ ಜಿಲ್ಲೆಗೆ ಹೋಗುವ ಸಂಬಂಧ ಸರ್ಕಾರ ಮಟ್ಟದಲ್ಲಿ ನಿರ್ಧಾರವಾಗಬೇಕು. ಈಗಾಗಲೇ ವಿಮಾನಯಾನ ಆರಂಭವಾಗಿದ್ದು, ವಿದೇಶದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರನ್ನು ಬೆಂಗಳೂರಿಗೆ ಕರೆತಂದು ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.