ADVERTISEMENT

ಯಶಸ್ವಿ ಉದ್ದಿಮೆದಾರರಾಗಿ: ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 16:41 IST
Last Updated 18 ಸೆಪ್ಟೆಂಬರ್ 2021, 16:41 IST
ಕೋಲಾರದಲ್ಲಿ ಶನಿವಾರ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎನ್.ರವಿಚಂದ್ರ, ಸಿಡಾಕ್ ಕೇಂದ್ರದ ನಿರ್ದೇಶಕ ಎಚ್.ಎಸ್.ವೀರಣ್ಣ ಉದ್ಘಾಟಿಸಿದರು. ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯರಾಪುರಿ, ಶಿಬಿರಾರ್ಥಿಗಳು ಇದ್ದಾರೆ
ಕೋಲಾರದಲ್ಲಿ ಶನಿವಾರ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎನ್.ರವಿಚಂದ್ರ, ಸಿಡಾಕ್ ಕೇಂದ್ರದ ನಿರ್ದೇಶಕ ಎಚ್.ಎಸ್.ವೀರಣ್ಣ ಉದ್ಘಾಟಿಸಿದರು. ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯರಾಪುರಿ, ಶಿಬಿರಾರ್ಥಿಗಳು ಇದ್ದಾರೆ   

ಕೋಲಾರ: ‘ತರಬೇತಿಯಲ್ಲಿ ಸ್ವಸಾಮರ್ಥ್ಯ ಗುರುತಿಸಿಕೊಳ್ಳುವಿಕೆ, ಉದ್ದಿಮೆ ಹೇಗೆ ಆರಂಭಿಸಬೇಕು ಮತ್ತು ಯಾವ ರೀತಿ ಮುಂದುವರಿಸಿಕೊಂಡು ಹೋಗಬೇಕು ಎಂಬುದನ್ನು ಅರಿಯಿರಿ’ ಎಂದು ಸಿಡಾಕ್ ಕೇಂದ್ರದ ನಿರ್ದೇಶಕ ಎಚ್.ಎಸ್.ವೀರಣ್ಣ ಕಿವಿಮಾತು ಹೇಳಿದರು.

ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಅಭಿವೃದ್ಧಿ ಶಿಬಿರದಲ್ಲಿ ಮಾತನಾಡಿದರು.

‘ಯಶಸ್ವಿ ಉದ್ದಿಮೆದಾರರೊಂದಿಗೆ ಸಂವಾದ, ಕೈಗಾರಿಕೆಗಳ ಭೇಟಿ ಕಾರ್ಯಕ್ರಮಗಳಿರುತ್ತವೆ. ತರಬೇತಿ ನಂತರವೂ ಎದುರಾಗುವ ಅಡೆತಡೆ, ಸವಾಲು ಎದುರಿಸುವಲ್ಲಿ ಸಿಡಾಕ್ ನೆರವಾಗುತ್ತದೆ. ಈ ನೆರವು ಪಡೆದು ಯಶಸ್ವಿ ಉದ್ದಿಮೆದಾರರಾಗಿ’ ಎಂದು ಆಶಿಸಿದರು.

ADVERTISEMENT

‘ಉದ್ದಿಮೆದಾರರಾಗುವುದು ಕಠಿಣ ಹಾದಿ. ಸಾಲಕ್ಕಾಗಿ ಬ್ಯಾಂಕ್ ವ್ಯವಸ್ಥಾಪಕರ ಮನವೊಲಿಸಿ ಉದ್ದಿಮೆ ಯೋಜನೆ ತಾವೇ ತಯಾರಿಸಿಕೊಳ್ಳುವಷ್ಟು ಜ್ಞಾನ ಸಂಪಾದಿಸಬೇಕು’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯರಾಪುರಿ ಸಲಹೆ ನೀಡಿದರು.

‘ಉದ್ಯಮ ಕುರಿತು ಸಂಪೂರ್ಣ ಮಾಹಿತಿ ಮತ್ತು ತರಬೇತಿ ಪಡೆದು ಉದ್ದಿಮೆ ಆರಂಭಿಸಿ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಬೇಕು. ಉದ್ದಿಮೆ ಆರಂಭಿಸುವ ಮುನ್ನ ಉದ್ದಿಮೆ ಕುರಿತಂತೆ ಸಮಗ್ರ ರೂಪರೇಷೆ ಸಿದ್ಧಪಡಿಸಿ ಮಾರುಕಟ್ಟೆ ಅಧ್ಯಯನ ಮಾಡಬೇಕು’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎನ್.ರವಿಚಂದ್ರ ತಿಳಿಸಿದರು.

ಸರ್ಕಾರಕ್ಕೆ ಅಸಾಧ್ಯ: ‘ಪ್ರತಿ ವರ್ಷ ರಾಜ್ಯದಲ್ಲಿ 10 ಲಕ್ಷ ಪದವೀಧರರು ತೇರ್ಗಡೆಯಾಗುತ್ತಿದ್ದು, ಇವರೆಲ್ಲರಿಗೂ ಉದ್ಯೋಗ ನೀಡುವುದು ಸರ್ಕಾರದಿಂದ ಅಸಾಧ್ಯ. ಆದ್ದರಿಂದ ಸ್ವಂತ ಉದ್ಯಮ ಆರಂಭಿಸುವ ಕುರಿತು ಸಿಡಾಕ್ ತರಬೇತಿ ಮೂಲಕ ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಇತರರಿಗೂ ಉದ್ಯೋಗ ಕಲ್ಪಿಸುವಂತೆ ಮಾಡುತ್ತಿದೆ’ ಎಂದು ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು ವಿವರಿಸಿದರು.

ತರಬೇತುದಾರ ಆರ್.ಕಲ್ಯಾಣ್‌ಕುಮಾತ್‌ ಹಾಗೂ ವಿವಿಧ ತಾಲ್ಲೂಕುಗಳ ತರಬೇತುದಾರರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.